'ಪ್ರೀತಿಯಿಂದ ರಮೇಶ್..' ಅಭಿನಯಿಸಿರುವ ಚಿತ್ರಕ್ಕೆ ಎರಡನೇ ನಾಯಕನಾಗಿ ಕಿರಣ್ ಆಯ್ಕೆಯಾಗಿದ್ದಾರೆ. ಈ ಮೊದಲು ಪ್ರೀತಂ ಗುಬ್ಬಿ ನಿರ್ದೇಶನದ 'ಹಾಗೆ ಸುಮ್ಮನೆ'ಯಲ್ಲಿ ನಟಿಸಿದ್ದ ನಾಯಕ ನಟ.
ಹೌದು. ರಮೇಶ್ ಅರವಿಂದ್ ಅವರ ಮುಂದಿನ ಚಿತ್ರ 'ಪ್ರೀತಿಯಿಂದ ರಮೇಶ್..' ಚಿತ್ರದಲ್ಲಿ ನಟಿಸುವಂತೆ ಕಿರಣ್ಗೆ ಕರೆ ಬಂದಿದೆಯಂತೆ. ಚಿತ್ರದಲ್ಲಿ ನಾನು ಎರಡನೇ ನಾಯಕನ ಪಾತ್ರದಲ್ಲಿದ್ದೇನೆ. ಬಹುಶಃ ಈ ಚಿತ್ರ ನನಗೆ ಅದೃಷ್ಟ ತರಬಹುದು ಎಂಬುದು ಅವರ ವಿಶ್ವಾಸದ ನುಡಿ.
ಒಂದು ವೇಳೆ ಮೊದಲ ಚಿತ್ರ 'ಹಾಗೆ ಸುಮ್ಮನೆ' ಯಶಸ್ವಿಯಾಗಿದ್ದರೆ ಕಿರಣ್ ಕೈಗೆ ಸಿಗುತ್ತಿರಲಿಲ್ಲವೋ ಏನೋ? ಆದರೆ ಅದೃಷ್ಟ ಕೈಕೊಟ್ಟಿತು. ಚಿತ್ರಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಬಳಿಕ ಕೋಮಲ್ ಅಭಿನಯದ ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಚಿತ್ರದಲ್ಲಿ ಅವಕಾಶ ಸಿಕ್ಕಿದರೂ, ಹೆಸರು ಮಾಡಿದ್ದು ಕೋಮಲ್ ಮಾತ್ರ. ಚಿತ್ರಕ್ಕೆ ಸಹಿ ಹಾಕುವಾಗಲೇ ಪಾತ್ರದ ಇತಿಮಿತಿ ಬಗ್ಗೆ ಅರಿವಿತ್ತು. ಇಂಥದ್ದೊಂದು ಚಿತ್ರ ನನಗೆ ದೊಡ್ಡ ಹೆಸರು ತಂದುಕೊಡುತ್ತದೆ ಎಂದು ನಾನೇನೂ ಅಂದುಕೊಂಡಿರಲಿಲ್ಲ ಎನ್ನುತ್ತಾರೆ ಕಿರಣ್.
ಇದೀಗ ಒಳ್ಳೆಯ ಪಾತ್ರಕ್ಕಾಗಿ ತಾಳ್ಮೆಯಿಂದ ಕಾದದ್ದಕ್ಕೆ ಕೊನೆಗೂ ಫಲ ಸಿಕ್ಕಿದೆ. ರಮೇಶ್ ಅವರ ಮುಂದಿನ ಚಿತ್ರದಲ್ಲಿ ಉತ್ತಮ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೃಷ್ಟವೂ ಜೊತೆಗಿರಲಿ ಅಂತ ಹಾರೈಸೋಣ.