ಮುಂಗಾರು ಮಳೆ ಚಿತ್ರ ಒಂದು ಮುಗಿಯದ ಕಥೆ. ಇದಾದ ಬಳಿಕ ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ 'ಮಳೆ'ಗಳು ಸುರಿದರೂ ಅದು ಮುಂಗಾರು ಮಳೆಯಾಗಲಿಲ್ಲ. ಇದೀಗ ಅದೇ ಮಳೆ ಸುರಿಸಿದ ನಟ ಗಣೇಶ್ ತನ್ನದೇ ನಿರ್ಮಾಣ ಹಾಗೂ ಅಭಿನಯದಲ್ಲಿ 'ಮಳೆಯಲಿ ಜೊತೆಯಲಿ' ಬರುತ್ತಿದ್ದಾರೆ. ಹಾಗಾಗಿ ಮತ್ತೆ ಮುಂಗಾರು ಮಳೆ ನೆನಪಾಗುತ್ತಿದೆ.
ಮುಖ್ಯವಾಗಿ 'ಮುಂಗಾರು ಮಳೆ' ಚಿತ್ರದಲ್ಲಿ ಗಣೇಶ್ ಮಳೆಯಲ್ಲಿ ನೆನೆಯುತ್ತಾ... ಕುಡಿಯುತ್ತಾ ನಾಯಕಿ ಪೂಜಾಗಾಂಧಿ ಎದುರಿಗೆ ನಿಲ್ಲಿಸಿಕೊಂಡು 'ಪರ ಪರ ಎಂದು ತಲೆ ಕರ್ಕೊಂಡು ಅದು ಗಾಯವಾಗಿ.. ಗಾಯ ಕ್ಯಾನ್ಸರ್ಗೆ ತಿರುಗಿ ಡಾಕ್ಟರ್ ತಲೇನೇ ತೆಗಿಬೇಕು...' ಎನ್ನುವ ಮಾತು ಇಂದು ಕೂಡ ಹುಡುಗರ ನಾಲಗೆಯ ತುದಿಯಲ್ಲಿ ತೇಲಾಡುವ ಮಾತು. ಈ ದೃಶ್ಯದಲ್ಲಿ ಧರಿಸಿದ್ದ ಪ್ಯಾಂಟ್, ವೈಟ್ ಕಲರ್ ಶರ್ಟ್ ಅನ್ನು ತಮ್ಮ ನಿರ್ಮಾಣದ ಚಿತ್ರದಲ್ಲೂ ಗಣೇಶ್ ಬಳಸಿಕೊಳ್ಳುತ್ತಿರುವುದು ವಿಶೇಷ.
IFM
ನನಗೆ ಆ ಪ್ಯಾಂಟ್ ಮತ್ತು ಶರ್ಟ್ ಮೇಲೆ ತುಂಬಾ ಸೆಂಟಿಮೆಂಟ್. ಆದರೆ, ಇದನ್ನು ಧರಿಸಿದರೆ ಸಿನಿಮಾ ಹಿಟ್ ಆಗುತ್ತದೆ ಎಂದು ನಂಬಿಲ್ಲ. ಮನರಂಜನೆಗಾಗಿ ಈ ಡ್ರೆಸ್ ಧರಿಸಿದ್ದೇನೆ. ಇಂಟ್ರೊಡಕ್ಷನ್ ಹಾಡಿನಲ್ಲಿ ಈ ಕಾಸ್ಟ್ಯೂಮ್ ಬಂದು ಹೋಗುತ್ತದೆ. ಈ ಹಾಡನ್ನು ನಾನೇ ಹಾಡಿದ್ದೇನೆ. ತೆರೆಮೇಲೆ 30 ಸೆಕೆಂಡ್ ಬರಬಹುದು ಅಷ್ಟೇ ಎಂದು ವಿವರಿಸುತ್ತಾರೆ ಗಣೇಶ್.
ಮಳೆಯಲಿ ಜೊತೆಯಲಿ ಚಿತ್ರದ ಮಾತಿನ ಹಂತದ ಚಿತ್ರೀಕರಣ ಮುಗಿದು ರಿರೆಕಾರ್ಡಿಂಗ್ ಕೂಡ ಮುಗಿದಿದೆ. ಪ್ರೀತಂ ಗುಬ್ಬಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಮುಂಬೈ ಮೂಲದ ಅಂಜಲಿ ಸುಖಾನಿ ಮತ್ತು ಯುವಿಕಾ ಚೌಧರಿ ನಟಿಸುತ್ತಿದ್ದಾರೆ.