ಸಧ್ಯಕ್ಕೆ ಸ್ಯಾಂಡಲ್ ವುಡ್‌ನಲ್ಲಿ ಮಿಂಚಿನ ಬಳ್ಳಿಯಾಗಿ ಸುದ್ದಿಮಾಡುತ್ತಿರುವ ನಟಿ ಐಂದ್ರಿತಾ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಏಕಾಏಕಿ ಕನ್ನಡಕ್ಕೆ ಲಗ್ಗೆ ಇಟ್ಟ ಬೆಡಗಿ ಕನ್ನಡ ಚಿತ್ರರಂಗವನ್ನು ಸಂಪೂರ್ಣ ಆಕ್ರಮಿಸಿಕೊಂಡಿದ್ದಾರೆ.
ಇದೀಗ ಈಕೆ ಅಡುಗೆ ಮನೆಗೂ ಕಾಲಿಟ್ಟಿದ್ದಾಳೆ. ಆಶ್ಚರ್ಯ ಪಡಬೇಡಿ. ಚಿತ್ರಗಳ ಆಯ್ಕೆಯಲ್ಲಿ ಎಷ್ಟು ಚ್ಯೂಸಿಯೋ ಅಷ್ಟೇ, ಅಡುಗೆ ರುಚಿಯಲ್ಲೂ ಕೂಡ. ಈಕೆಗೆ ನಾನ್‌ವೆಜ್ ಅಂದರೆ ಪಂಚಪ್ರಾಣ. ಅದಿದ್ದರೆ, ಬೇರೆ ಯಾವ ತಿಂಡಿ ಕೂಡ ಇಷ್ಟವಾಗುವುದಿಲ್ಲವಂತೆ! ಅದರಲ್ಲೂ ಚಿಕನ್ ಡಿಶ್ ಅಂದ್ರೆ ತುಂಬಾ ಇಷ್ಟ. ಮೂರು ಹೊತ್ತು ಚಿಕನ್ ಕೊಟ್ಟರೂ ಅದನ್ನೇ ತಿನ್ನುತ್ತೇನೆ ಎಂದು ಕಣ್ಣರಳಿಸಿ ಹೇಳುತ್ತಾರೆ ಐಂದ್ರಿತಾ.
ಅಷ್ಟೇ ಅಲ್ಲ, ಒಂದೊಂದು ಬಾರಿಗೆ ಮಧ್ಯರಾತ್ರೀಲಿ ನೇರವಾಗಿ ನಟಿ ರಮ್ಯಾ ಮನೆಗೆ ಹೋಗಿ ಆಕೆಯ ಜತೆಗೆ ಊಟ ಮಾಡಿದ್ದೂ ಇದೆ ಎಂದು ನೆನಪಿಸಿಕೊಳ್ಳುತ್ತಾರೆ ಅವರು. ರಮ್ಯಾ ಹಾಗೂ ಐಂದ್ರಿತಾ ಸ್ನೇಹಿತೆಯರು. ಅವರಿಬ್ಬರೂ ಬಿಡುವಿದ್ದಾಗಲೆಲ್ಲ ಸಿನಿಮಾ ವಿಷಯ ಬಿಟ್ಟು ಬೇರೆಲ್ಲಾ ಹರಟೆ ಕೊಚ್ಚುತ್ತಾರಂತೆ. ಆದರೆ ಅಡುಗೆ ಮಾಡುವುದರಲ್ಲಿ ಮಾತ್ರ ಹಿಂದೆ. ಅಪ್ಪ-ಅಮ್ಮ ಎಲ್ಲಾದರೂ ಹೊರಗೆ ಹೋದಾಗಲೂ ಮನೆಯಲ್ಲಿ ಅಡುಗೆ ಮಾಡುವವರು ಇರೋದ್ರಿಂದ ಇದುವರೆಗೆ ಕಿಚನ್ಗೆನ್ ಕಡೆಗೆ ತಲೆನೇ ಹಾಕಿಲ್ಲವಂತೆ. ಇನ್ನು ಸ್ಟೌವ್ ಹಚ್ಚಿ ಅಡುಗೆ ಮಾಡೋ ಮಾತು ದೂರದ್ದು ಬಿಡಿ.