ಅದು ಎಲ್ಲರಿಗೂ ಮೊದಲ ಅನುಭವವೇ. ಸಹ ನಿರ್ದೇಶಕರಾಗಿದ್ದ ಮಲ್ಲಿಕಾರ್ಜುನ್ 'ಮೊದಲ ಸಲಾ' ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ.
ಇದು ನಿರ್ದೇಶಕ ಪುರುಷೋತ್ತಮ್ಗೂ ಮೊದಲ ಅನುಭವ. ಎಸ್. ಮಹೇಂದರ್, ಇಂದ್ರಜಿತ್ ಸೇರಿದಂತೆ ಹಲವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವುಳ್ಳ ಇವರು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ನಾಯಕನಾಗಿ ಯಶ್ ಆಯ್ಕೆಯಾಗಿದ್ದಾರೆ. ಪ್ರೀತಿ ಇಲ್ಲದ ಮೇಲೆ ಧಾರವಾಹಿಯಲ್ಲಿ ನಟಿಸುತ್ತಿರುವಾಗಲೇ ತಮ್ಮ ಚಿತ್ರಕ್ಕೆ ಇವರೇ ನಾಯಕ ಎಂದು ನಿರ್ಧರಿಸಿದ್ದರಂತೆ ನಿರ್ದೇಶಕರು.
ಅಷ್ಟೇ ಅಲ್ಲ. ಚಿತ್ರದ ಕತೆ ಕೇಳಿ ಛಾಯಾಗ್ರಾಹಕ ವೇಣು ಎರಡು ಸಿನಿಮಾಗಳನ್ನು ಬಿಟ್ಟು ಈ ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನುತ್ತಾರೆ ಪುರುಷೋತ್ತಮ್. ಮುಖ್ಯವಾಗಿ ಈ ಚಿತ್ರದಲ್ಲಿ ಲೈಟಿಂಗ್ಸ್ ಬಳಕೆ ಕಡಿಮೆ. ಹೆಚ್ಚಿನ ಭಾಗವನ್ನು ಪ್ರಕೃತಿ ಸಹಜ ಬೆಳಕಿನಲ್ಲೇ ಚಿತ್ರೀಕರಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಅವರು. ಯಶ್ಗಂತೂ ಚಿತ್ರದ ಕತೆ ತಂಬಾ ಇಷ್ಟವಾಯಿತಂತೆ. ಇದೊಂದು ಫ್ರೆಶ್ ಸಬ್ಜೆಕ್ಟ್. ಪ್ರತಿಯೊಬ್ಬರ ಜೀವನದಲ್ಲೂ ಕಾಡುವ ಮೊದಲ ಅನುಭವದ ಘಟನೆಗಳೇ ಚಿತ್ರವಾಗಿದೆ ಎನ್ನುತ್ತಾರೆ ಅವರು. ಅಂದಹಾಗೆ ಮಲ್ಲಿಕಾರ್ಜುನ್ ಗದಗ ನಿರ್ದೇಶನದ ಶುಭಾಶಯ ಚಿತ್ರದಲ್ಲೂ ಯಶ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.