ಮುಂಗಾರುಮಳೆ ಪೂಜಾಗಾಂಧಿ ಸಿಕ್ಕಾಪಟ್ಟೆ, ಯದ್ವಾತದ್ವಾ ಅಪ್ಸೆಟ್ ಆಗಿಬಿಟ್ಟಿದ್ದಾರಂತೆ. ಮುಂಗಾರುಮಳೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಳೆ ಸುರಿಸಿದ ಬೆಡಗಿಯ ಕಣ್ಣಲ್ಯಾಕೆ ಮುಸಲ ಧಾರೆ ಎಂದು ನಿರ್ದೇಶಕರ, ನಿರ್ಮಾಪಕರು ಸೇರಿದಂತೆ ನೆರೆದಿದ್ದ ಜನಸ್ತೋಮವೇ ಪ್ರಶ್ನಾರ್ಥಕವಾಗಿ ಆಕೆಯೆಡೆಗೆ ನೋಡಿದರೂ ಊಹೂಂ, ಕಣ್ಣೀರು ನಿಂತಿಲ್ಲ.
ಮೊನ್ನೆ ಮೊನ್ನೆ ಪೂಜಾ ಗಾಂಧಿ 'ತವರಿನ ಋಣ' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರಂತೆ. ಆ ಚಿತ್ರವನ್ನು ದೊಡ್ಡಬಳ್ಳಾಪುರದ ಬಳಿ ಮದುವೆ ಮನೆಯ ಒಂದು ಸೆಟ್ ಹಾಕಿ ಚಿತ್ರೀಕರಿಸಲಾಗುತ್ತಿತ್ತು. ಅಲ್ಲಿ ಪೂಜಾಗೆ ಮದುವೆ ಆಗುವ ಶೂಟಿಂಗ್ ಮಾಡಬೇಕಿತ್ತು. ಇನ್ನೇನು ಚಿತ್ರೀಕರಣ ಶುರುವಾಗಬೇಕು ಎನ್ನುವಷ್ಟರಲ್ಲಿ ಪೂಜಾ ಮೊಬೈಲು ರಿಂಗಿಣಿಸಿತ್ತು. ಮೊಬೈಲು ಕರೆ ಸ್ವೀಕರಿಸಿದ ತಕ್ಷಣವೇ ಬಿಕ್ಕಿ ಬಿಕ್ಕಿ ಗೋಳೋ ಎಂದು ಪೂಜಾ ಅಳಲಾರಂಭಿಸಿದರು. ಸೆಟ್‌ನಲ್ಲಿದ್ದ ಎಲ್ಲರಿಗೂ ಪರಮಶ್ಚರ್ಯ. ಪೂಜಾ ಯಾಕೆ ಅಳುತ್ತಿದ್ದಾರೆ ಅಂತ ಯಾರಿಗೂ ಗೊತ್ತಾಗಲಿಲ್ಲವಂತೆ. ಪೂಜಾರಿಗೆ ಏನೋ ಶಾಕಿಂಗ್ ನ್ಯೂಸ್ ಬಂದಿದೆ ಅಂತ ಎಲ್ಲರಿಗೂ ಖಚಿತವಾಗಿತ್ತು. ಬಹುಶಃ ಯಾರೋ ಹತ್ತಿರದವರು ತೀರಿಕೊಂಡಿರಬೇಕು. ಅಥವಾ ಏನೋ ಆಗಬಾರದ ಘಟನೆ ನಡೆದಿರಬೇಕು ಎಂದು ಅಷ್ಟಾಗಲೇ ಸೆಟ್‌ನಲ್ಲಿ ಅಂತೆಕಂತೆಗಳ ಮಹಾಪೂರ ಹರಿಯಲು ಶುರುವಾಗಿತ್ತು.
ಅಷ್ಟರಲ್ಲಿ ಮಾತು ಮುಗಿಸಿ ಮೂಜಾ ಬಂದರು. ಅತ್ತು ಅತ್ತು ಮುಖ ಕೆಂಪಾಗಿತ್ತು. ಕಣ್ಣು ಕಳೆಗುಂದಿ ಕೆಂಪಾಗಿತ್ತು. ಮುಖದಲ್ಲಿ ನಗು ಮಾಸಿತ್ತು. ಒಟ್ಟಾರೆ ಪೂಜಾ ಫುಲ್ ಮೂಡ್ ಆಫ್ ಆಗಿ ಬಂದು ಕೂತರು. ನಿರ್ದೇಶಕರಿಗೋ ತಲೆಬಿಸಿ. ಮದುವೆ ಶೂಟಿಂಗ್ ಇರೋ ಸಂದರ್ಭ ಪೂಜಾ ಹೀಗೆ ಮೂಡ್ ಆಫ್ ಆಗಿ ಕಳೆಗುಂದಿದ ಮುಖದಲ್ಲಿ ಬಂದು ಕೂತು ಬಿಟ್ಟರಲ್ಲಾ ಎಂದು. ಆದರೂ ಪೂಜಾಗೆ ಏನೋ ಶಾಕಿಂಗ್ ನ್ಯೂಸ್ ಬಂದಿದೆಯೆಂಬುದಂತೂ ಎಲ್ಲರಿಗೂ ಮನದಟ್ಟಾಗಿತ್ತು. ಎಲ್ಲರೂ ನಿಧಾನವಾಗಿ ಕಾದರು. ಕೊನೆಗೂ ವಿಷಯ ಹೊರಬಿತ್ತು.
ವಿಷಯ ಏನಪ್ಪಾ ಅಂದ್ರೆ ಪೂಜಾ ಗಾಂಧಿಯ ಮುದ್ದಿನ ನಾಯಿಮರಿ 'ಜರ್ರಿ' ಅಪಘಾತದಲ್ಲಿ ತೀರಿಹೋಗಿತ್ತು. ಇದೇ ವಿಷಯ ತಲುಪಿಸಲು ಪೂಜಾ ಅವರ ಮೊಬೈಲು ರಿಂಗಿಣಿಸಿತ್ತು. ಅದಕ್ಕಾಗಿಯೇ ಪೂಜಾರ ದುಃಖದ ಕಟ್ಟೆ ಒಡೆದು ಅತ್ತು ಬಿಟ್ಟಿದ್ದರಂತೆ!