'ಅರಳುವ ಹೂವುಗಳೇ ಬಾಡದಿರಿ...' ಎಂದು 'ಮೈ ಅಟೋಗ್ರಾಫ್'ನಲ್ಲಿ ಮುಂದುಡಿ ಹೋದ ಮನಸ್ಸುಗಳಿಗೆ ಸಾಂತ್ವನ ಹಾಡಿದ ಮೀನಾಗೆ ಮದುವೆಯಾಯಿತು, ಇನ್ನು ಬಹುಷಃ ಆಕೆ ಚಿತ್ರರಂಗದಲ್ಲಿ ಇರಲಿಕ್ಕಿಲ್ಲ ಎಂದು ಊಹಿಸಿದವರ ಊಹೆಯಂತೂ ಖಂಡಿತಾ ಸುಳ್ಳು. ಯಾಕೆಂದರೆ ಮೀನಾ ಮತ್ತೆ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅದೂ ಕೂಡಾ ಪಕ್ಕಾ ಹೆಂಡತಿಯಾಗಿಯೇ.!
ಹೌದು. 'ಹೆಂಡ್ತೀರ್ ದರ್ಬಾರ್' ಎಂಬ ಚಿತ್ರದಲ್ಲಿ ಮೀನಾ ನಟಿಸುತ್ತಿದ್ದಾರೆ. ಚಿತ್ರದ ನಾಯಕನಾಗಿ ರಮೇಶ್ ಅರವಿಂದ್ ಕಾಣಿಸಿಕೊಳ್ಳುತ್ತಿದ್ದಾರೆ. ತಮಿಳಿನಲ್ಲಿ ಮೀನಾ ಹಾಗೂ ರಮೇಶ್ ಜೊತೆಯಾಗಿ ನಟಿಸಿದ್ದರೂ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಇವರಿಬ್ಬರು ಜೋಡಿಯಾಗುತ್ತಿದ್ದಾರೆ. ಅಂದಹಾಗೆ ಇದು ತಮಿಳಿನ 'ವರವು ಎತ್ತಣ ಸೆಲವು ಪತ್ತಣ' ಎಂಬ ಚಿತ್ರದ ರಿಮೇಕ್.
ಈ ಚಿತ್ರದಲ್ಲಿ ಕಾಮಿಡಿಯೇ ಪರಮ ಉದ್ದೇಶ. ಹಾಗಾಗಿ ನಗುವಿಗೇನೂ ಚಿತ್ರದಲ್ಲಿ ಬರ ಇರಲಿಕ್ಕಿಲ್ಲ. ರಂಗಾಯಣ ರಘು, ಸಾಧು ಕೋಕಿಲ ತಾರಾಗಣವಿರುವ ಈ ಚಿತ್ರವನ್ನು ವಿ.ಶೇಖರ್ ನಿರ್ದೇಶಿಸುತ್ತಿದ್ದಾರೆ. ಇವರು ತಮಿಳಿನ ಇದೇ ಚಿತ್ರವನ್ನು ನಿರ್ದೇಶಿಸಿದ್ದರು ಅನ್ನೋದು ಗಮನಾರ್ಹ.