'ನಿನ್ನ ಪೂಜೆಗೆ ಬಂದೆ ಮಾದೇಶ್ವರಾ...' ಎಂದು ಸೈಕೋ ಚಿತ್ರದಲ್ಲಿ ಹಾಡಿದ್ದೇ ಹಾಡಿದ್ದು.., 'ಸೈಕೋ' ಯಶಸ್ವಿಯಾಗದಿದ್ದರೂ ರಘು ದೀಕ್ಷಿತರ ಕಂಠ ಹಾಗೂ ಡಿಫರೆಂಟ್ ಗಾಯನಕ್ಕೆ ಕನ್ನಡ ಚಿತ್ರರಸಿಕರು ರಘು ದೀಕ್ಷಿತರ ಅಭಿಮಾನದಲ್ಲಿ ಸೈಕೋಗಳೇ ಆಗುತ್ತಾರೆಂದರೂ ತಪ್ಪಿಲ್ಲ. ಕನ್ನಡ ಸದ್ಯದ ಭರವಸೆಯ ಪ್ರತಿಭೆ, ಸಂಗೀತ ನಿರ್ದೇಶಕ ರಘು ದೀಕ್ಷಿತ್. ಇಂತಿಪ್ಪ ಪ್ರತಿಭೆ ರಘು ಮೊನ್ನೆ ಜೈಲಿಗೆ ಹೋಗಿದ್ದಾರೆ! ಅದೂ ತನ್ನ ಹುಟ್ಟುಹಬ್ಬದ ದಿನವೇ!!!
ಗಾಬರಿ ಬೀಳಬೇಡಿ. ರಘು ದೀಕ್ಷಿತ್ ಜೈಲಿಗೆ ಹೋಗಿದ್ದೂ ನಿಜ. ಆದರೆ ಅಷ್ಟೇ ವೇಗದಲ್ಲಿ ಅಲ್ಲಿಂದ ವಾಪಸ್ ಬಂದಿದ್ದೂ ನಿಜ. ಮೊನ್ನೆ ನ.11ಕ್ಕೆ ತನ್ನ 35ನೇ ಹುಟ್ಟು ಹಬ್ಬ ಆಚರಿಸುವ ದಿನವೇ ರಘು ದೀಕ್ಷಿತ್ ವಿಶಿಷ್ಟವಾದ ಪ್ರಯತ್ನ ಮಾಡಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿಗೆ ಹೋಗಿ ಅಲ್ಲಿನ ಕೈದಿಗಳೆದುರು ಹಾಡಿ ವಿನೂತನವಾಗಿ ತನ್ನ ಬರ್ತ್‌ಡೇ ಆಚರಿಸಿಕೊಂಡರು.
ರಘು ದೀಕ್ಷಿತ್ ಈಗ ಕನ್ನಡದಲ್ಲಿ ಅತ್ಯಂತ ಜನಪ್ರಿಯ ಗಾಯಕ. ಮನೆಮನೆಯಲ್ಲೂ ರಘು ಹೆಸರು ಚಿರಪರಿಚಿತ. 2008-09ರಲ್ಲಿ ರಘು ದೀಕ್ಷಿತ್ ಮ್ಯೂಸಿಕ್ ಆಲ್ಬಂಗಳು ಕರ್ನಾಟಕದಲ್ಲಿ ಅತೀ ಹೆಚ್ಚು ಮಾರಾಟ ಕಂಡ ಮ್ಯೂಸಿಕ್ ಆಲ್ಬಂ.
ಪ್ರಕೃತಿ ಎಂಬ ಹೆಸರಿನಲ್ಲಿ ಗೆಳೆಯರ ಜೊತೆಗೆ ಗುಂಪು ಕಟ್ಟಿಕೊಂಡು ಸುಗಮ ಸಂಗೀತ ಲೋಕದಲ್ಲಿ ಹಲವು ವಿನೂತನ ಪ್ರಯತ್ಮ ನಾಡಿದವರು ಎಂ.ಎಸ್.ಪ್ರಸಾದ್. ಈಗ ಅದೇ ಎಂ.ಎಸ್. ಪ್ರಸಾದ್ ನೇತೃತ್ವದ ಪ್ರಕೃತಿಯ ಅಡಿಯಲ್ಲೇ ರಘು ದೀಕ್ಷಿತ್ ತಮ್ಮ ಹುಟ್ಟುಹಬ್ಬಕ್ಕೆ ಜೈಲನ್ನೇ ವೇದಿಕೆ ಮಾಡಿಕೊಂಡರು. ಜೈಲಿನಲ್ಲಿ 'ನಿನ್ನ ಪೂಜೆಗೆ ಬಂದೆ ಮಾದೇಶ್ವರಾ..' ಹಾಗೂ 'ನೀನೇ ಬೇಕು...'ಎಂದು ರಘು ದೀಕ್ಷಿತ್ ಹಾಡುವಾಗ ಕೈದಿಗಳು ಹುಚ್ಚೆದು ಕುಣಿದರು. ಶಿಳ್ಳೆ ಹಾಕಿದರು. ಏಕತಾನತೆಯ ಜೈಲು ಜೀವನದಲ್ಲಿ ಆ ಜೈಲು ಹಕ್ಕಿಗಳು ಮನಸಾರೆ ಕುಣಿದರು. ಮನಸ್ಸು ಹಗುರ ಮಾಡಿಕೊಂಡು ಸಂಭ್ರಮ ಪಟ್ಟರು.
ಕನ್ನಡ ಸತ್ಯ ಹೆಸರಿನಲ್ಲಿ ರಘು ದೀಕ್ಷಿತ್ 2010ರ ಜನವರಿಯಲ್ಲಿ ಕಾರ್ಯಕ್ರಮವ್ನನೂ ನೀಡಲಿದ್ದಾರೆ. ಕನ್ನಡಕ್ಕೊಬ್ಬ ಎ.ಆರ್.ರೆಹಮಾನ್ ಉದಯವಾಯಿತು ಎಂದು ರಘು ದೀಕ್ಷಿತ್‌ರನ್ನು ವಿಮರ್ಶಕರು ಹಾಡಿ ಹೊಗಳಿದ್ದರು. ಇಂಥ ರಘು ದೀಕ್ಷಿತ್‌ಗೆ ತಡವಾಗಿಯಾದರೂ ಹುಟ್ಟುಹಬ್ಬದ ಶುಭಾಷಯ ಹೇಳೋಣ.