ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಸಾಮಾನ್ಯವಾಗಿ ಒಂದು ಸಮಾರಂಭ ಏರ್ಪಡಿಸಿ, ಗಣ್ಯರನ್ನು ಕರೆಸಿ, ನಾಲ್ಕು ಹಿತನುಡಿಗಳನ್ನು ಆಡಿಸಿ ಗಡದ್ದಾಗಿ ಮನೆಯಲ್ಲಿ ರಜೆಯ ಮಜಾ ಅನುಭವಿಸೋದಂತೂ ಈಗೀಗ ಅಭ್ಯಾಸವಾಗಿ ಹೋದಂತಿದೆ. ಇನ್ನೂ ಕೆಲವರು ಕನ್ನಡದ ೆನಪಿಗೆ ಸಾಂಕೇತಿಕವಾಗಿ ಏನಾದರೂ ಕಾರ್ಯಕ್ರಮ ಇಟ್ಟುಕೊಳ್ಳುತ್ತಾರೆ. ಆದರೆ ಕಾಲ್ಗೆಜ್ಜೆ ಎಂಬ ಚಿತ್ರತಂಡ ವಿನೂತನ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡಿದೆ.
ಕಾಲ್ಗೆಜ್ಜೆ ಚಿತ್ರತಂಡ ಇತ್ತೀಚೆಗೆ ಭದ್ರಾವತಿಯ ಸಿದ್ದಾರ್ಥ ಅಂಧ ಮಕ್ಕಳ ಶಾಲೆಯಲ್ಲಿ ರಾಜ್ಯೋತ್ಸವ ಆಚರಣೆ ಮಾಡಿದೆ. ಅಷ್ಟೇ ಅಲ್ಲ, ಆ ಶಾಲೆಯ ಐದು ಮಂದಿ ಅಂಧ ಹೆಣ್ಣುಮಕ್ಕಳಿಗೆ ಬೆಳ್ಳಿಯ ಕಾಲ್ಗೆಜ್ಜೆಗಳನ್ನು ತೊಡಿಸಿ, ಶಾಲೆಯ ಮಕ್ಕಳೆಲ್ಲರಿಗೂ ಹಣ್ಣು, ಬಟ್ಟೆ ವಿತರಿಸಿ ಆ ಮಕ್ಕಳ ಸಂಭ್ರಮದಲ್ಲಿ ಬೆರೆತು, ವಿಶಿಷ್ಟವಾಗಿ ರಾಜ್ಯೋತ್ಸವ ಆಚರಿಸಿದೆ.
ಸಂಗೀತಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿರುವ ಕಾಲ್ಗೆಜ್ಜೆ ಚಿತ್ರದಲ್ಲಿ ಆರು ಹಾಡುಗಳಿದ್ದು, ಗಂಧರ್ವ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಎಸ್.ಬಂಗಾರು ಅವರ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಚಿತ್ರವನ್ನು ಎಂ.ನಾಗಭೂಷಣ್ ನಿರ್ಮಿಸುತ್ತಿದ್ದಾರೆ. ಜಾಲಿ ಡೇಸ್ ಚಿತ್ರದ ವಿಶ್ವಾಸ್, ಚೆಲುವಿನ ಚಿಲಿಪಿಲಿಯ ರೂಪಿಕಾ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ.