ಚಾಕೋಲೇಟ್ ಹೀರೋನಂತಿರುವ ಲವರ್ ಬಾಯ್ ಇಮೇಜಿನ 'ಮೊಗ್ಗಿನ ಮನಸ್ಸು' ನಾಯಕ ಯಶ್‌ಗೆ ಈಗ ಕೈ ತುಂಬಾ ಆಫರ್. ಕಿರುತೆರೆಯ ಮೂಲಕ ನಟನೆಗೆ ಪ್ರವೇಶಿಸಿದರೂ ಯಶ್‌ಗೆ ಹಿರಿತೆರೆಯಲ್ಲೀಗ ಬರೋಬ್ಬರಿ ಕೆಲಸ.
ನಿಜ ಹೇಳಬೇಕೆಂದರೆ, ಯಶ್‌ಗೆ ಬಾಲ್ಯದಿಂದಲೂ ಶಿವಣ್ಣನ ಜೊತೆ ಸಣ್ಣ ಪಾತ್ರದಲ್ಲಾದರೂ ನಟಿಸಬೇಕೆಂಬ ಆಸೆಯಿತ್ತಂತೆ. ಆ ಆಸೆ ಇದೀಗ ಈಡೇರಿದೆ ಎನ್ನುತ್ತಾರೆ ಯಶ್. ಶಿವರಾಜ್ ಕುಮಾರ್ ಅವರೊಂದಿಗೆ ನಟಿಸುವ ಅವಕಾಶ 'ತಮಸ್ಸು' ಚಿತ್ರದ ಮೂಲಕ ದಕ್ಕಿದೆ. ತಮಸ್ಸಿನಲ್ಲಿ ಪುಟ್ಟ ಪಾತ್ರವಾದರೂ ಒಳ್ಳೆಯ ಪಾತ್ರ. ನನಗೆ ಅವಾರ್ಡ್ ಸಿಕ್ಕಿದಷ್ಟೇ ಖುಷಿಯಾಗಿದೆ ಎನ್ನುತ್ತಾರೆ ಯಶ್.
ತಮಸ್ಸು ಚಿತ್ರದಲ್ಲಿ ಯಶ್ ಅವರದ್ದು ಮುಸ್ಲಿಂ ಹುಡುಗನ ಪಾತ್ರ. ಮುಸ್ಲಿಂ ಹುಡುಗಿಯಾಗಿ ಹರ್ಷಿಕಾ ಪೂಣಚ್ಚ ನಟಿಸುತ್ತಿದ್ದಾರಂತೆ. ಯಶ್ ಅಭಿನಯದ 'ಗೋಕುಲ' ಚಿತ್ರ ತಂಡ ಮಡಿಕೇರಿಗೆ ಪಾದ ಬೆಳೆಸಿದೆ .ಈ ನಡುವೆ 'ಕಳ್ಳರ ಸಂತೆ' ಬಿಡುಗಡೆಗೆ ರೆಡಿಯಾಗಿದೆ. ಅಂತೂ ಯಶ್ ಈಗ ಫುಲ್ ಬ್ಯುಸಿ. ಅಗ್ನಿ ಶ್ರೀಧರ್ ಇದುವರೆಗೂ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುತ್ತಿದ್ದರು. ಇದೇ ಮೊದಲ ಬಾರಿಗೆ ತಮಸ್ಸು ಮೂಲಕ ನಿರ್ದೇಶನಕ್ಕೂ ಇಳಿದಿದ್ದಾರೆ.