ಹೊರ ರಾಜ್ಯದ ನಿರ್ದೇಶಕರು ಕನ್ನಡಕ್ಕೆ ಆಗಮಿಸಿದರೆ ಅದು ದೊಡ್ಡ ಸುದ್ದಿಯಾಗುತ್ತದೆ. ಅದೇ ನಮ್ಮ ನಿರ್ದೇಶಕರು ಅಲ್ಲಿಗೆ ಹೋದರೆ ನಮಗೇ ತಿಳಿಯುವುದಿಲ್ಲ. ಈಗ ಚಂದ್ರು ಅವರದ್ದೂ ಅದೇ ಕಥೆ. ಇತ್ತೀಚೆಗೆ ತಾಜ್‌ಮಹಲ್ ಖ್ಯಾತಿಯ ನಿರ್ದೇಶಕ ಚಂದ್ರು ಮೊನ್ನೆ ಹೈದರಾಬಾದ್‌ಗೆ ಹೋಗಿ ಬಂದಿದ್ದಾರೆ.
ಅವರ ತಾಜ್‌ಮಹಲ್ ಚಿತ್ರ ತೆಲುಗಿಗೆ ರಿಮೇಕ್ ಆಗಿದೆ. ಅದೇ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಅಲ್ಲಿ ಅದ್ದೂರಿಯಾಗಿ ನಡೆದಿದೆ. ಶಿವಾಜಿ ನಟಿಸಿ, ನಿರ್ಮಿಸಿರುವ ಈ ಚಿತ್ರದ ಬಗೆಗೆ ಈಗಾಗಲೆ ಸಾಕಷ್ಟು ಒಳ್ಳೆಯ ಮಾತುಗಳು ಆಂಧ್ರದಲ್ಲಿ ಕೇಳಿ ಬರುತ್ತಿವೆಯಂತೆ. ಅಲ್ಲಿನ ಚಿತ್ರ ರಸಿಕರು ಕೂಡ ತಾಜ್‌ಮಹಲ್ ನಿರೀಕ್ಷೆಯಲ್ಲಿದ್ದಾರೆ.
ಮೊನ್ನೆ ನಡೆದ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಚಂದ್ರು ಬಗ್ಗೆ ನಟ ಶಿವಾಜಿ ನಾಲ್ಕು ಒಳ್ಳೆಯ ಮಾತುಗಳನ್ನಾಡಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ತೆಲುಗು ಚಿತ್ರಗಳನ್ನು ನಿರ್ದೇಶಿಸಬೇಕು ಎಂದು ಆಹ್ವಾನ ಪತ್ರ ನೀಡಿ, ಸಭೆಯಲ್ಲಿ ಸನ್ಮಾನಿಸಿದ್ದಾರೆ.
ಕನ್ನಡದ ನಿರ್ದೇಶಕನೊಬ್ಬನನ್ನು ತೆಲುಗು ಚಿತ್ರೋದ್ಯಮ ಕೊಂಡಾಡಿದೆ. ಮತ್ತೆ ಚಂದ್ರು ಅಲ್ಲಿನ ಚಿತ್ರವೊಂದರ ಸಂಪೂರ್ಣ ಸಾರಥ್ಯ ವಹಿಸುತ್ತಾರಾ ಎನ್ನುವುದೇ ಮುಂದಿರುವ ಪ್ರಶ್ನೆ.