ತೀರ್ಥ ಬರೊದು ಯಾವಾಗ?
ಯಾಕೋ ತೀರ್ಥ ಸಿಗೋ ಲಕ್ಷಣ ಕಾಣುತ್ತಿಲ್ಲ. ಅವಕ್ಕಾಗಬೇಡಿ. ಇಲ್ಲಿ ಯಾರೂ ತೀರ್ಥಯಾತ್ರೆ ಮಾಡುತ್ತಾ, ದೇವಸ್ಥಾನದಲ್ಲಿ ಭಜನೆ ಮಾಡಿ ತೀರ್ಥಕ್ಕಾಗಿ ಕಾದು ಕುಳಿತಿಲ್ಲ. ಇಲ್ಲಿ ಮಾತಾಡುತ್ತಿರೋದು ಅದೇ ತೀರ್ಥ ಎಂಬ ಚಿತ್ರದ ಬಗ್ಗೆ.ಹೌದು. ತೀರ್ಥ ಚಿತ್ರದ ಚಿತ್ರೀಕರಣ ಶುರುವಾಗಿ ವರ್ಷವೇ ಕಳೆದು ಹೋಗಿದೆ. ಆದರೆ ಚಿತ್ರಕ್ಕೆ ಮಾತ್ರ ಬಿಡುಗಡೆ ಭಾಗ್ಯ ಮಾತ್ರ ಬಂದಿಲ್ಲ. ಇದಕ್ಕೂ ಮುಂಚೆ 'ಮಿಸ್ಟರ್ ತೀರ್ಥ' ಎಂದು ಚಿತ್ರದ ಹೆಸರು ಬದಲಿಸಲಾಗಿದೆ.ಚಿತ್ರದ ಮೂರು ಗೀತೆಗಳ ಚಿತ್ರೀಕರಣಕ್ಕೆ ದೂರದ ಬ್ಯಾಂಕಾಕಿಗೆ ತೆರಳಲಾಗಿತ್ತು. ಉಳಿದ ಶೂಟಿಂಗ್ ಬೆಂಗಳೂರು ಮತ್ತು ಮೈಸೂರಿನಲ್ಲಿ ಚಿತ್ರೀಕರಿಸಲಾಗಿತ್ತು. ಒಟ್ಟು 70 ದಿನಗಳ ಚಿತ್ರೀಕರಣ ನಡೆದಿರುವ ಈ ಚಿತ್ರಕ್ಕೆ ಅಶ್ವಿನಿ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಮಾತಿನ ಜೊಡಣೆ ಹಾಗೂ ಹಿನ್ನೆಲೆ ಸಂಗೀತ ಕೂಡ ಮುಕ್ತಾಯವಾಗಿದೆ. ಸದ್ಯದಲ್ಲೇ ಚಿತ್ರದ ಪ್ರಥಮ ಪ್ರತಿ ಹೊರಬರುತ್ತಿದೆ.ಮುಂದಿನ ತಿಂಗಳು ಮಿಸ್ಟರ್ ತೀರ್ಥ ಟಾಕೀಸಿಗೆ ಬರುತ್ತಾನೆ ಎಂದು ಚಿತ್ರದ ಬಗ್ಗೆ ಮಾಹಿತಿ ಕೊಡುತ್ತಾರೆ ನಿರ್ದೇಶಕ ಸಾಧು ಕೋಕಿಲಾ. ಸುದೀಪ್ ನಾಯಕನಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಆಂಧ್ರ ಬೆಡಗಿ ಸಲೋನಿ ನಾಯಕಿಯಾಗಿದ್ದಾಳೆ. ಗುರುಕಿರಣ್ ಸಂಗೀತವಿದೆ. ಹಲವು ವರ್ಷಗಳ ನಂತರ ಗೀತಾ ಮತ್ತೆ ಈ ಚಿತ್ರದ ಮೂಲಕ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.