ಪೊರ್ಕಿ ಚಿತ್ರದ ನಾಯಕಿ ಪ್ರಣೀತಾಗೆ ಹೊಸ ಅವಕಾಶವೊಂದು ಸಿಕ್ಕಿದೆಯಂತೆ. ಸುದೀಪ್ ನಾಯಕ ನಟನಾಗಿ ನಟಿಸುತ್ತಿರುವ ಹಾಗೂ ಎಸ್. ನಾರಾಯಣ್ ನಿರ್ದೇಶನದ ನರಸಿಂಹ ಚಿತ್ರಕ್ಕೂ ಪ್ರಣೀತಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
ನಿಜ ಹೇಳಬೇಕೆಂದರೆ, ನರಸಿಂಹ ಚಿತ್ರ ತಮಿಳಿನ ಸಾಮಿ ಚಿತ್ರದ ರಿಮೇಕ್. ಪೊರ್ಕಿ ಬಿಡುಗಡೆ ಆಗುವ ತನಕ ಯಾವುದೇ ಚಿತ್ರದಲ್ಲೂ ಅಭಿನಯಿಸಬಾರದೆಂಬ ಕರಾರು ಪ್ರಣೀತಾಗೆ ಇದೆ. ಆದರೆ ಅಷ್ಟಾಗಲೇ ಪ್ರಣೀತಾಳ ಏನು ಅದೃಷ್ಟವೋ ಗೊತ್ತಿಲ್ಲ, ಹಲವು ಆಫರ್‌ಗಳು ಬರುತ್ತಿವೆ. ಕರಾರಿದ್ದರೂ, ಈಗ ಪೊರ್ಕಿ ಬಿಡುಗಡೆಗೆ ಮುನ್ನ ನಾರಾಯಣ್ ಚಿತ್ರಕ್ಕೆ ಆಕೆ ಆಯ್ಕೆಯಾಗಿರುವುದು ವಿಶೇಷ.
ಸದ್ಯಕ್ಕಂತೂ ಪ್ರಣೀತಾಳಿಗೆ ನಾರಾಯಣ ಜಪ ಮಾತ್ರ. ಒಂದು ಸಿನಿಮಾ ಮುಗಿಯುವ ಹೊತ್ತಿಗೆ ಇನ್ನೊಂದು ಖ್ಯಾತನಾಮರ ಚಿತ್ರ ಕೈಗೆ ದಕ್ಕುಬಿಟ್ಟರೆ, ಅದಕ್ಕಿಂತ ದೊಡ್ಡ ಖುಷಿಯೇನಿದೆ ಹೇಳಿ? ಹಾಗೆಯೇ ಪ್ರಣೀತಾ ನಾರಾಯಣ ಭಜನೆ ಮಾಡುತ್ತಿರುವುದು ಸಹಜವೇ ಎಂದು ಗಾಂಧಿನಗರಿ ಮಾತಾಡಿಕೊಳ್ಳುತ್ತಿದೆ. ನರಸಿಂಹ ಚಿತ್ರ ಇದೇ ಡಿಸೆಂಬರ್‌ನಲ್ಲಿ ಮುಹೂರ್ತ ನಡೆಯಲಿದೆ.