ಬಗೆಹರಿದ 'ಶೇಕಡಾವಾರು' ಬಿಕ್ಕಟ್ಟು: ಚಿತ್ರ ನಿರ್ಮಾಪಕರಿಗೆ ಜಯ
MOKSHA
ಶೇಕಡಾವಾರು ಪದ್ಧತಿಯಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡಲು ಒತ್ತಾಯಿಸಿದ್ದ ನಿರ್ಮಾಪಕರ ಸಂಘಕ್ಕೆ ಕೊನೆಗೂ ಜಯ ದೊರೆತಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯಸ್ಥಿಕೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಶೇಕಡವಾರು ಪದ್ಧತಿಯನ್ನು ಅಂಗೀಕರಿಸುವ ನಿರ್ಧಾರದ ಮೂಲಕ ಕನ್ನಡ ಚಲನಚಿತ್ರ ನಿರ್ಮಾಪಕರು ಮತ್ತು ಚಿತ್ರಮಂದಿರ ಮಾಲೀಕರ ನಡುವಿನ ಗುದ್ದಾಟಕ್ಕೆ ತೆರೆ ಬಿದ್ದಿದೆ.
ಶೇಕಡಾವಾರು ಪದ್ಧತಿಯಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡಬೇಕೆಂಬುದು ನಿರ್ಮಾಪಕರ ಒತ್ತಾಯವಾಗಿದ್ದರೆ, ಅತ್ತ ಚಿತ್ರಮಂದಿರದ ಮಾಲೀಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಬಾಡಿಗೆ ಪದ್ಧತಿಯಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದರು. ಚಲನಚಿತ್ರ ವಾಣಿಜ್ಯ ಮಂಡಳಿಗೆ ಈ ಇಬ್ಬರ ಜಗಳ ಕಗ್ಗಂಟಾಗಿ ಪರಿಣಮಿಸಿತ್ತು. ಅಲ್ಲದೆ, ಸಮಸ್ಯೆ ಬಗೆಹರಿಯದಿದ್ದಲ್ಲಿ, ಜನವರಿ 1ರಿಂದ ಕನ್ನಡ ಸೇರಿದಂತೆ ಯಾವ ಭಾಷೆಯ ಚಿತ್ರಗಳನ್ನು ಬಿಡುಗಡೆ ಮಾಡಲು ಬಿಡುವುದಿಲ್ಲ ಎಂಬ ನಿರ್ಮಾಪಕ ಸಂಘದ ಎಚ್ಚರಿಕೆಯೂ ಮಂಡಳಿಯ ಎದುರಿತ್ತು. ಇದೀಗ ಈ ಕಾರ್ಮೋಡ ಕರಗಿದ್ದು ತಣ್ಣನೆಯ ಮಳೆಯಾಗಿದೆ. ಸಮಸ್ಯೆಯೂ ಬಗೆಹರಿದಿದ್ದು, ಶೇಕಡಾವಾರು ಪದ್ಧತಿಗೆ ಚಿತ್ರಮಂದಿರದ ಮಾಲೀಕರು ಹೂಂಗುಟ್ಟಿದ್ದಾರೆ.
ಬಿಕ್ಕಟ್ಟು ಬಗೆಹರಿದ ನಂತರ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ, ಈಗ ಸಮಸ್ಯೆ ಬಗೆಹರಿದಿದ್ದು ಇನ್ನು ಮುಂದೆ ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ಕನ್ನಡ ಮತ್ತು ಬೇರೆ ಭಾಷೆಯ ಚಿತ್ರಗಳಿಗೂ ಶೇಕಡವಾರು ಪದ್ಧತಿ ಅನ್ವಯವಾಗಲಿದೆ. ಈ ಸಂಬಂಧ, ಮುಂದಿನ ವಾರ ಕಲಾವಿದರು, ನಿರ್ದೇಶಕರು, ನಿರ್ಮಾಪಕರ ಸಂಘದ ಸಭೆ ನಡೆಯಲಿದೆ. ಶೇಕಡವಾರು ಕ್ರಮವನ್ನು ಮುಖ್ಯವಾಗಿ ಬಿ ಮತ್ತು ಸಿ ಕೇಂದ್ರಗಳಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಚರ್ಚೆ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಜಯಮಾಲಾ ತಿಳಿಸಿದ್ದಾರೆ.