ಕನ್ನಡ ಚಿತ್ರಲೋಕದ ಮರೆಯಲಾಗದ ಹಿರಿಯ ಪೋಷಕ ಕಲಾವಿದ ದೊಡ್ಡಣ್ಣ ಅವರಿಗೀಗ 60ರ ಸಂಭ್ರಮ. 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ದೊಡ್ಡಣ್ಣ ಕನ್ನಡ ಚಿತ್ರರಂಗಕ್ಕೆ ನಿಜವಾಗಿಯೂ ದೊಡ್ಡ ಅಣ್ಣನೇ ಸರಿ.
ನಗರದ ವೆಸ್ಟ್ ಆಫ್ ಕಾರ್ಡ ರಸ್ತೆಯ ಇಸ್ಕಾನ್ ದೇವಾಲಯದಲ್ಲಿ ತಮ್ಮ 60ನೇ ವರ್ಷದ ಜನ್ಮ ದಿನಾಚರಣೆಯನ್ನು ತಮ್ಮ ಪತ್ನಿಯ ಜೊತೆಗೆ ಹೂವಿನ ಹಾರ ಬದಲಾಯಿಸಿಕೊಳ್ಳುವ ಮೂಲಕ ವಿಶಿಷ್ಟವಾಗಿ ಆಚರಿಸಿಕೊಂಡ ಅವರಿಗೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಶುಭ ಹಾರೈಸಿದರು. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಚಿತ್ರದ ಮೂಲಕ ನಟನೆಗೆ ಪ್ರವೇಶಿಸಿದ ದೊಡ್ಡಣ್ಣ ಎಲ್ಲಾ ರೀತಿಯ ಪಾತ್ರಗಳನ್ನೂ ನೀರು ಕುಡಿದಂತೆ ನಿಭಾಯಿಸಿದ್ದಾರೆ. ಆದರೂ ಅವರು ಹೆಚ್ಚಾಗಿ ಗುರುತಿಸಿಕೊಂಡಿರುವುದು ಹಾಸ್ಯ ನಟನಾಗಿಯೇ.
ಕನ್ನಡ ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರ ಸಮ್ಮುಖದಲ್ಲಿ ದೊಡ್ಡಣ್ಣ ಕೇಕ್ ಕತ್ತರಿಸಿ ಸರಳವಾಗಿ ತಮ್ಮ ಬರ್ತ್ಡೆ ಕಾರ್ಯಕ್ರಮ ಆಚರಿಸಿಕೊಂಡರು. ರಾಕ್‌ಲೈನ್ ವೆಂಕಟೇಶ್, ರಾಜೇಂದ್ರಸಿಂಗ್ ಬಾಬು, ಜಗ್ಗೇಶ್, ಅಂಬರೀಶ್, ರವಿಚಂದ್ರನ್, ಹಂಸಲೇಖ, ಉಪೇಂದ್ರ, ದ್ವಾರಕೀಶ್, ಸುಧಾರಾಣಿ, ಗಿರಿಜಾ ಲೋಕೇಶ್, ಎಸ್. ನಾರಾಯಣ್, ಸುಂದರ್ ರಾಜ್, ಕಾಶೀನಾಥ್ ಮುಂತಾದವರು ದೊಡ್ಡಣ್ಣನ ಹುಟ್ಟುಹಬ್ಬಕ್ಕೆ ಆಗಮಿಸಿ ಅವರ ಆಶೀರ್ವಾದ ಪಡೆದುಕೊಂಡು ಶುಭ ಹಾರೈಸಿದರು.