ದರ್ಶನ್ ನಾಯಕನಟನಾಗಿ ಅಭಿನಯಿಸಲಿರುವ ಮತ್ತೊಂದು ರಿಮೇಕ್ ಚಿತ್ರ ಸೆಟ್ಟೇರುತ್ತಿದೆ. ತೆಲುಗು ಸಿನಿಮಾ ಶೌರ್ಯಂ ಚಿತ್ರದ ರಿಮೇಕ್ ಎಂದು ಬಿಡಿಸಿ ಹೇಳಬೇಕಿಲ್ಲ. ಅಷ್ಟೇ ಅಲ್ಲ, ಯಥಾಪ್ರಕಾರ, ನಿರ್ದೇಶಕ ಕೋಕಿಲಸಾಧು ಪರಭಾಷಾ ಹುಡುಗಿಯೊಬ್ಬಳಿಗೆ ರತ್ನಗಂಬಳಿ ಹಾಸಿ ಸ್ವಾಗತ ಕೋರಿದ್ದಾರೆ.
ಆಕೆಯ ಹೆಸರು ಮದಲಸಾ ಶರ್ಮಾ. ಮುದ್ದು ಮುಖದ ಬೆಳ್ಳನೆಯ ಬೆಡಗಿ ಮದಲಸಾ ಮೂಲತಃ ತಮಿಳು ಹುಡುಗಿ. ತೆಲುಗು ಚಿತ್ರಗಳಲ್ಲೂ ನಟಿಸಿದ್ದಾಳೆ. ಈಕೆ ಇತ್ತೀಚೆಗೆ ನಟಿಸಿದ ಚಿತ್ರವೆಂದರೆ 'ಫಿಟ್ಟಿಂಗ್ ಮಾಸ್ಟರ್'. ಮದಲಸಾ, ಅಲ್ಲಿನ ನಿರ್ದೇಶಕರನ್ನೇ ನಾಚಿಸುವಂಥ ಬಟ್ಟೆ ತೊಟ್ಟು ಕುಣಿದಾಕೆ!
ಅಂದಹಾಗೆ, ಇನ್ನೂ ಹೆಸರಿಡದ ಈ ರಿಮೇಕ್ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಶುರುವಾಗುವ ಸೂಚನೆಗಳು ಕಾಣುತ್ತಿವೆ. ಇದೇ ಚಿತ್ರಕ್ಕೆ ಮೊದಲು ನಾಯಕಿಯಾಗಿ ರಾಗಿಣಿ ಆಯ್ಕಯಾಗಿದ್ದರು. ಆದರೆ ಅವರು ಗೋಕುಲ ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದರು ಎಂಬ ಒಂದೇ ಒಂದು ಕಾರಣಕ್ಕೆ ದರ್ಶನ್, ಐಟಂ ಗರ್ಲ್ ನನ್ ನಾಯಕಿಯಾಗೋದು ಬೇಡ ಎನ್ನುವ ಮೂಲಕ ಈ ಚಿತ್ರದಿಂದ ರಾಗಿಣಿಗೆ ಗೇಟ್ ಪಾಸ್ ನೀಡಲಾಯಿತು ಎಂಬುದು ನಿಜವಾಗಿಯೂ ಸುಳ್ಳಲ್ಲ.