ಕನಸಿನ ರಾಣಿ ಮಾಲಾಶ್ರೀ ಕಿರಣ್ ಬೇಡಿ ಚಿತ್ರದ ನಂತರ 'ವೀರ' ನಾಮಾಂಕಿತದ ಚಿತ್ರಕ್ಕೆ ಅಣಿಯಾಗುತ್ತಿದ್ದಾರಂತೆ. ಅವರ ಕಿರಣ್ ಬೇಡಿ ಚಿತ್ರವನ್ನು ಪ್ರೇಕ್ಷಕರು ನಿಜವಾಗಿಯೂ ಬೇಡಿ ಎಂದೇ ಬಿಟ್ಟರು. ಆದರೆ ಆ ಸೋಲಿನಿಂದ ಚೇತರಿಸಿಕೊಂಡಿರುವ ಮಾಲಾಶ್ರೀ ಶೀಘ್ರದಲ್ಲೇ ಮತ್ತೆ ವೀರ ಚಿತ್ರದ ಮೂಲಕ ವೀರ ವನಿತೆಯಾಗಲಿದ್ದಾರೆ. ಅತ್ತ ಪತಿ ರಾಮು ಕೂಡಾ ಕಿರಣ್ ಬೇಡಿಯಿಂದ ಅಲ್ಪತೃಪ್ತರಾಗಿದ್ದು, ವೀರದ ಕಡೆಗೆ ವೀರ ಹೆಜ್ಜೆಯಿಟ್ಟಿದ್ದಾರೆ.
ಹಾಂಕಾಂಗ್, ಚೀನಾದಲ್ಲೇ ವೀರ ಚಿತ್ರದ ಹೆಚ್ಚಿನ ಭಾಗ ಶೂಟಿಂಗ್ ಆಗಲಿದೆಯಂತೆ. ಬೆಂಗಳೂರು, ಮೈಸೂರು, ಕಾರವಾರ ಹಾಗೂ ಮಂಗಳೂರಿನಲ್ಲೂ ಚಿತ್ರೀಕರಣ ನಡೆಯಲಿದೆ ಎನ್ನುತ್ತಾರೆ ಕೋಟಿ ನಿರ್ಮಾಪಕ ರಾಮು. ಮತ್ತೊಮ್ಮೆ ಪತ್ನಿಯ ಕೃಪಾಕಟಾಕ್ಷದಿಂದ ರಾಮು ಕೈಸುಟ್ಟುಕೊಳ್ಳದಿದ್ದರೆ ಅಷ್ಟೇ ಸಾಕು ಎನ್ನುತ್ತದೆ ಗಾಂಧಿನಗರಿಯ ಗಲ್ಲಿಗಲ್ಲಿಗಳು. ವೀರ ಚಿತ್ರ ಸೂಪರ್ 35 ಎಂ.ಎಂನಲ್ಲಿ ಗ್ರಾಫಿಕ್ಸ್ ಬಳಸಿ ತಯಾರಿಸಲಾಗುತ್ತಿದ್ದು, ಎಂದಿನಂತೆ ಊಹನೆಯಂತೆಯೇ ಇದೂ ಕೂಡಾ ದೊಡ್ಡ ಬಜೆಟ್ ಚಿತ್ರ. ನವೆಂಬರ್ ಅಂತ್ಯದಲ್ಲಿ ಚಿತ್ರೀಕರಣ ಆರಂಭವಾಲಿದೆ.
ಡೈಲಾಗ್ ಕಿಂಗ್ ಸಾಯಿಕುಮರ್ ಸಹೋದರ ಎಂ.ಕೆ ಶರ್ಮಾ ಈ ಚಿತ್ರದ ನಿರ್ದೇಶಕರು. ರಾಹುಲ್‌ದೇವ್, ಆಶಿಶ್ ವಿದ್ಯಾರ್ಥಿ, ಶಿವಾಜಿ ಶಿಂಧೆ, ಸಾಧು ಕೋಕಿಲಾ, ದೊಡ್ಡಣ್ಣ ಮುಂತಾದ ಮಹಾನ್ ಕಲಾವಿದರು ವೀರ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.