ಸಂಚಿತಾಳ ಮಿಂಚಿನ ಸಂಚಾರ

ದೀಪಿಕಾ ಪಡುಕೋಣೆಯಷ್ಟು ಅದೃಷ್ಟವಂತೆ ಅಲ್ಲದಿದ್ದರೂ, ಸಂಚಿತಾ ಪಡುಕೋಣೆ ತಕ್ಕಮಟ್ಟಿಗೆ ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಲು ಪ್ರಯತ್ನ ಪಡುತ್ತಿರುವ ಚಿಗುರು ಪ್ರತಿಭೆ. ಲೂಸ್ ಮಾದ ಉರುಫ್ ಯೋಗೀಶ್ ಜೊತೆಗೆ ಸಂಚಿತಾ ನಾಯಕಿಯಾಗಿ ರಾವಣ ಚಿತ್ರದಲ್ಲಿ ಅಭಿನಯಿಸಿದ್ದರು. ಇದು ಅವರ ಮೊದಲ ಕನ್ನಡ ಚಿತ್ರ. ವಿಶೇಷವೆಂದರೆ ರಾವಣ ಚಿತ್ರಕ್ಕೂ ಮುಂಚೆ ಸಂಚಿತಾ ಮುತ್ತಳಗಿ ಹೆಸರಿನ ತಮಿಳು ಚಿತ್ರದಲ್ಲಿ ನಟಿಸಿ ನಂತರ ಕನ್ನಡದ ನೆನಪಾಗಿ ಇತ್ತ ಬಂದಿದ್ದರು. ನಿಮಗೆ ಗೊತ್ತಿರಲು ಸಾದ್ಯವಿಲ್ಲ, ಸಂಚಿತಾ ತಮಿಳಿನ ಮತ್ತೊಂದು ಬಿಗ್ ಬಜೆಟ್ ಚಿತ್ರದಲ್ಲೂ ಕೂಡಾ ನಟಿಸಿ ಬಂದಿದ್ದರು. ಚಿತ್ರದ ಹೆಸರು ವೇಟ್ಟೈಕಾರನ್. ಕಪ್ಪು ಸುಂದರ ವಿಜಯ್ ಈ ಚಿತ್ರದ ನಾಯಕ. ಇದರಲ್ಲಿ ಸಂಚಿತಾ ಎರಡನೇ ನಾಯಕಿಯಾಗಿ ಅಭಿನಯಿಸಿದ್ದಾರೆ. ಹೌದು, ಮೊದಲನೇ ನಾಯಕಿ ಯಾರೆಂದು ಕೇಳಿದಿರಾ? ಆಕೆಯೂ ಸಹ ವೀರ ಕನ್ನಡತಿಯೇ. ಆ ಇನ್ನೊಬ್ಬಾಕೆ ಸದ್ಯ ತೆಲುಗಿನಲ್ಲಿ ಭಾರೀ ಹೆಸರು ಮಾಡುತ್ತಿರುವ ಅನುಷ್ಕಾ ಶೆಟ್ಟಿ. ಈ ಚಿತ್ರ ಡಿಸೆಂಬರ್ ಮೂರನೇ ವಾರ ತೆರೆಕಾಣಲಿದೆ. ಅದೇ ವೇಳೆಗೆ ಕನ್ನಡದ ರಾವಣ ಕೂಡ ಥೀಯೇಟರಿಗೆ ಲಗ್ಗೆ ಇಡುವ ಸಾಧ್ಯತೆ ಇದೆ.