'ಮನಸಾರೆ' ಚಿತ್ರದ ಗೆಲುವಿಗೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರೇ ಕಾರಣ. ಅಂತಹ ನಿರ್ಮಾಪಕರಿದ್ದರೆ ಮಾತ್ರ ಈ ರೀತಿಯ ಚಿತ್ರಗಳು ಮೂಡಿ ಬರಲು ಸಾಧ್ಯ ಎಂದು ರಾಕ್‌ಲೈನ್ ವೆಂಕಟೇಶರನ್ನು ಹೊಗಳಿ ಅಟ್ಟಕ್ಕೇರಿಸಿದರು ಯೋಗರಾಜ ಭಟ್ಟರು.
ಈ ಚಿತ್ರದ 50 ದಿನದ ಖುಷಿಗೆ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಭಟ್ಟರು, ಚಿತ್ರದ ಆರಂಭದ ಬಗ್ಗೆ ಭಯವಿತ್ತು. ನಿರೀಕ್ಷೆಗೂ ಮೀರಿ ಓಪನಿಂಗ್ ಸಿಕ್ಕಿದ್ದು ನೋಡಿ ಖುಷಿಯಾಯ್ತು. ಮನಸಾರೆ ತಂಡದ ಎಲ್ಲರಿಗೂ ಈ ಯಶಸ್ಸು ಸಲ್ಲಬೇಕು ಎಂದರು.
ಮನಸಾರೆ ಈಗಾಗಲೇ 15 ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಪೂರೈಸಿದೆ. ಶತದಿನೋತ್ಸವವನ್ನೂ ಆಚರಿಸುವ ಸೂಚನೆಗಳಿದೆ. ಈ ಚಿತ್ರಕ್ಕೆ ಭಟ್ಟರು ಹೆಚ್ಚು ಪ್ರಮೋಷನ್ ಮಾಡಿದ್ದರಂತೆ. ಎಲ್ಲದಕ್ಕಿಂತ ಮುಖ್ಯವಾಗಿ ನಿರ್ದೇಶಕರಿಗೆ ಸರಿಯಾಗಿ ಸಾಥ್ ನೀಡುವ ನಿರ್ಮಾಪಕರಿರಬೇಕು ಎಂದು ಭಟ್ಟರು ರಾಕ್ ಲೈನ್ ಅವರನ್ನು ಉದ್ದೇಶಿಸಿ ಮಾತನಾಡಿದರು.
ಇಲ್ಲಿಯವರೆಗೆ ರಾಕ್ ಲೈನ್ 29 ಚಿತ್ರಗಳನ್ನು ನಿರ್ಮಿಸಿದ್ದಾರಂತೆ. ಅವುಗಳಲ್ಲಿ ತುಂಬಾ ಸಂತೋಷ ಕೊಟ್ಟದ್ದು ಮನಸಾರೆ ಅಂತೆ. ಕಥೆ ಕೇಳಿದಾಗಲೇ ನಾನು ಚಿತ್ರ ಗೆಲ್ಲುತ್ತೆ ಅಂದುಕೊಂಡಿದ್ದೆ. ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.