'ಮನಸಾರೆ' ತೆರೆ ಕಂಡು ಪ್ರೇಕ್ಷಕರ ಮನ ಗೆದ್ದಿದೆ. ದಿಗಂತ್ ಅಭಿನಯದ ಮತ್ತೊಂದು ಚಿತ್ರ 'ಬಿಸಿಲೇ' ಬೆಳ್ಳಿತೆರೆಗೆ ಅಪ್ಪಳಿಸಲು ತುದಿಗಾಲಲ್ಲಿ ನಿಂತಿದೆ. ಅಲ್ಲಿಗೆ ಗುಳಿ ಕೆನ್ನೆಯ ದಿಗಂತ್‌ಗೆ ಡಬಲ್ ಖುಷಿ ಸಿಕ್ಕಂತಾಗಿದೆ.
ಸಂದೀಪ್ ಎಸ್. ಗೌಡ ನಿರ್ದೇಶನದ ಪ್ರಪ್ರಥಮ ಚಿತ್ರ ಬಿಸಿಲೇಯಲ್ಲಿ ದಿಗಂತ್‌ರದ್ದು ಸಾಫ್ಟ್‌ವೇರ್ ಹುಡುಗನ ಪಾತ್ರ. ದಿಗಂತ್‌ಗೆ ಜೋಡಿಯಾಗಿ ಜೋಗಿ ಖ್ಯಾತಿಯ ನಾಯಕಿ ಜೆನ್ನಿಫರ್ ಕೋತ್ವಾಲ್ ನಟಿಸಲಿದ್ದಾಳೆ. ಹಾಗಾಗಿ ಬಹುಶಃ ಚಿತ್ರದಲ್ಲಿ ಗ್ಲ್ಯಾಮರ್‌ಗೇನೂ ಕೊರತೆಯಿರಲಿಕ್ಕಿಲ್ಲ ಅನಿಸುತ್ತೆ ಅಂತ ಗಾಂಧಿನಗರದ ಪಡ್ಡೆಗಳು ಮಾತಾಡಿಕೊಳ್ಳುತ್ತಿದ್ದಾರೆ.
ನಿರ್ಮಾಪಕ ಕಿರಣ್ ಪಿ. ರೆಡ್ಡಿಗೆ ಸಿನಿಮಾ ಮಾಡುವ ಐಡಿಯಾನೇ ಇರಲಿಲ್ಲವಂತೆ. ಎರಡು ವರ್ಷಗಳ ಹಿಂದೆ ಅವರ ಸ್ನೇಹಿತ ಸಂದೀಪ್ ಗೌಡ ಒಂದು ಕತೆ ಹೇಳಿದ್ದರಂತೆ. ಆ ಕಥೆ ಅವರಿಗೆ ತುಂಬಾ ಹಿಡಿಸಿ ಮತ್ತೊಬ್ಬ ಸ್ನೇಹಿತ ಚಂದ್ರು ಟಿ. ಗೌಡರಿಗೆ ತಿಳಿಸಿ ಬಿಸಿಲೇ ಚಿತ್ರಕ್ಕೆ ಮೂಹೂರ್ತ ಇಟ್ಟರಂತೆ.
IFM
ಚಿತ್ರದ ಬಗ್ಗೆ ಹೇಳುವುದಾದರೆ ಇದೊಂದು ರೊಮ್ಯಾಂಟಿಕ್ ಕಾಮಿಡಿ ಸ್ಟೋರಿ. ಅರ್ಧಂಬರ್ಧ ಓದಿದ ಹುಡುಗನೊಬ್ಬ ಪ್ರೀತಿಗಾಗಿ ಹುಡುಗಿಯ ಹಿಂದೆ ಅಲೆದಾಡುವುದನ್ನೇ ಸ್ವಲ್ಪ ಲೇಟಾದರೂ ಲೇಟೆಸ್ಟ್ ಆಗಿ ಚಿತ್ರಿಸಿರುವುದಾಗಿ ಹೇಳುತ್ತಾರೆ ನಿರ್ದೇಶಕ ಸಂದೀಪ್. ದಿಗಂತ್‌ಗಂತೂ ಬಿಸಿಲೇ ಬಗ್ಗೆ ಭರ್ಜರಿ ನಿರೀಕ್ಷೆಗಳಿವೆ. ಇದು ಮನಸಾರೆ ಚಿತ್ರದಂತೆ ತುಂಬ ನವಿರಾದ ಕಥೆ. ಮನಸಾರೆಯಷ್ಟೇ ಖುಷಿ ಕೊಟ್ಟ ಕಥೆ. ಹಾಗಾಗಿ ಈ ಚಿತ್ರ ಮನಸಾರೆಯಂತೆಯೇ ಯಶಸ್ವಿಯಾಗಬಹುದು ಎಂಬುದು ದಿಗಂತ್ ಲೆಕ್ಕಾಚಾರ. ಅತ್ತ ಜೆನಿಫರ್ ಕೋತ್ವಾಲ್ ಎಂಬ ಚಿನಗುರುಳಿ ಬೆಡಗಿಯೂ ಕೂಡಾ ಬಿಸಿಲೇ ಬಗ್ಗೆ ಭಾರೀ ನಿರೀಕ್ಷೆ ಇಟ್ಟಿದ್ದಾಳಂತೆ. ದಿಗಂತ್ ಈಗ ಮನಸಾರೆ ಮೂಲಕ ಭಾರೀ ಯಶಸ್ಸು ಗಳಿಸಿದ್ದಾರೆ. ಅವರ ಯಶಸ್ಸಿನ ಬಗ್ಗೆ ನನಗೆ ಖುಷಿಯಿದೆ. ಅವರ ಜೊತೆಗೆ ನಟಿಸಿದ ಈ ಚಿತ್ರ ಯಶಸ್ವಿಯಾಗುವ ನಿರೀಕ್ಷೆ ನನ್ನದು ಎಂದಿದ್ದಾರೆ ಜೆನಿಫರ್.
ಬಹುತೇಕ ಕಾಡಿನೊಳಗೆ ಈ ಚಿತ್ರದ ಚಿತ್ರೀಕರಣವಾಗಿದೆಯಂತೆ. ಕೆಲವೇ ವಾರಗಳಲ್ಲಿ ಚಿತ್ರ ತೆರೆಗೆ ಅಪ್ಪಳಿಸಲಿದೆ. ಸದ್ಯಕ್ಕಂತೂ ಮನಸಾರೆ ಖ್ಯಾತಿಯಿಂದ ದಿಗಂತ್ ರಾತ್ರೋರಾತ್ರಿ ಸ್ಟಾರ್ ಪಟ್ಟಕ್ಕೇರಿದ್ದಾರೆ. ದಿಗಂತ್‌ರ ಈ ಸ್ಟಾರ್ ವ್ಯಾಲ್ಯೂ ಕೂಡಾ ಚಿತ್ರಕ್ಕೆ ಲಾಭವೇ ಸರಿ.