ರವಿಚಂದ್ರನ್‌ನಿಂದ ಮತ್ತೆ 'ಪ್ರೇಮಲೋಕ'? ಎಲ್ಲವೂ ಮಗನಿಗಾಗಿ!
MOKSHA
ರವಿಚಂದ್ರನ್ ತಮ್ಮ ಮಗ ಮನೋರಂಜನ್‌ಗಾಗಿ ಒಂದು ಚಿತ್ರ ಮಾಡುವ ಕನಸಿನ ಲೋಕದಲ್ಲಿದ್ದಾರಂತೆ. ತಮ್ಮ ಬಾಲಾಜಿಗಂತೂ ಚಿತ್ರ ಮಾಡಿ ಮಾಡಿ ಸಾಕಾಯ್ತು, ಇನ್ನು ಮಗನಿಗಾಗಿ ಚಿತ್ರ ಮಾಡಿಯಾದರೂ, ಯಶಸ್ವಿಯಾಗುತ್ತಾ ಅಂತ ಒಂದು ಕೈ ನೋಡೋಣ ಎಂಬುದೇ ಕ್ರೇಜಿ ಸ್ಟಾರ್ ಲೆಕ್ಕಾಚಾರವೋ ಏನೋ. ಒಟ್ಟಿನಲ್ಲಿ ರವಿಚಂದ್ರನ್ ಅಂತೂ ಮತ್ತೆ ತಮ್ಮ ಹಳೆಯ ಪ್ರೇಮಲೋಕ ಚಿತ್ರವನ್ನೇ ಮಗನಿಗಾಗಿ ಮತ್ತೊಮ್ಮೆ ಮಾಡುವ ಚಿಂತನೆಯಲ್ಲಿದ್ದಾರೆ.
ನಂಬಿದರೆ ನಂಬಿ, ಬಿಟ್ಟರೆ ಬಿಡಿ. ವಿಶೇಷ ಎನಪ್ಪಾ ಅಂದರೆ ಮಗನಿಗೋಸ್ಕರ ರವಿಚಂದ್ರನ್ ತಮ್ಮ 80ರ ಜಶಕದ ಸೂಪರ್ ಹಿಟ್ ಚಿತ್ರ ಪ್ರೇಮಲೋಕವನ್ನು ಮತ್ತೆ ಮಾಡುತ್ತಿದ್ದಾರೆ ಎಂಬ ಸುದ್ದಿಯೀಗ ಗಾಂಧಿ ನಗರದಲ್ಲಿ ಸಿಡಿದಿದೆ. ಆದರೆ ಅಂದಿನ ಪ್ರೇಮಕ್ಕೂ ಇಂದಿನ ಪ್ರೇಮಕ್ಕೂ ಶೈಲಿಯಲ್ಲಾದರೂ ವ್ಯತ್ಯಾಸವಿರಬಹುದು ಅಲ್ಲವೇ. ಬಹುಶಃ ಹಾಗಾಗಿಯೋ ಏನೋ, ರವಿಚಂದ್ರನ್ ಅದೇ ಪ್ರೇಮಲೋಕವ್ನು ಸ್ವಲ್ಪ ಇಂದಿನ ಕಾಲಕ್ಕೆ ಶೈಲಿಗೆ ಒಗ್ಗಿಸಿಕೊಂಡು ಮತ್ತೆ ಮಾಡುವ ಸ್ಕೆಚ್ ಹಾಕುತ್ತಿದ್ದಾರಂತೆ.
80ರ ದಶಕದಲ್ಲಿ ತೆರೆಕಂಡ ಪ್ರೇಮ ಲೋಕ ಚಿತ್ರ ಅಂದಿನ ಕಾಲದಲ್ಲಿ ಸೂಪರ್ ಹಿಟ್ ಆಗಿತ್ತು. 12 ಹಾಡುಗಳಿದ್ದ ಈ ಚಿತ್ರದಲ್ಲಿ ರವಿಚಂದ್ರನ್‌ಗೆ ಬಾಲಿವುಡ್ ಬೆಡಗಿ ಜೂಹಿಚಾವ್ಲಾ ನಾಯಕಿಯಾಗಿ ನಟಿಸಿದ್ದರು. ಅಷ್ಟೇ ಅಲ್ಲ, ವಿಷ್ಣುವರ್ಧನ್, ಅಂಬರೀಷ್ ಕೂಡಾ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾದ ಮೂಲಕ ರವಿಚಂದ್ರನ್- ಹಂಸಲೇಖಾ ಜೋಡಿ ಜನಪ್ರಿಯಾವಾಯಿತಷ್ಟೇ ಅಲ್ಲದೆ, ರಾತ್ರೋರಾತ್ರಿ ಹಂಸಲೇಖ ಕನ್ನಡ ಚಿತ್ರರಂಗದ ಸಂಗೀತ ಲೋಕದಲ್ಲಿ ಭರವಸೆಯ ಚುಕ್ಕಿಯಾಗಿ ಕಂಗೊಳಿಸಿದರು.
ಅಂದಹಾಗೆ, ಮಗನಿಗಾಗಿ ರವಿ ತುಂಬಾ ಕಥೆಗಳನ್ನೇ ಬರೆದಿದ್ದರು. ಅದರೆ, ಅದಾವುದೂ ಕೂಡಾ ಅವರಿಗೆ ಸರಿ ಬರಲಿಲ್ಲವಂತೆ. ಯಾರೋ ಪುಣ್ಯಾತ್ಮ ಗೆಳೆಯರೊಬ್ಬರು ನಿಮ್ಮ ಹಳೆಯ ಪ್ರೇಮಲೋಕವನ್ನೇ ರಿಮೇಕ್ ಮಾಡಿ ಎಂದು ಸಲಹೆ ಕೊಟ್ಟುಬಿಟ್ಟರಂತೆ. ಈ ಸಲಹೆಯೀಗ ರವಿಚಂದ್ರನ್‌ಗೆ ಸಕತ್ ಐಡಿಯಾ ಅಂತನಿಸಿದೆಯೋ ಗೊತ್ತಿಲ್ಲ, ಒಟ್ಟಾರೆ, ಅವರೀಗ ಮಾಡರ್ನ್ ಪ್ರೇಮಲೋಕಕ್ಕೆ ಚಿತ್ರಕಥೆ ಬರೆಯಲು ಕುಳಿತುಬಿಟ್ಟಿದ್ದಾರಂತೆ.
ನಟನಾಗುವುದು ನಿಜ. ಹೊಸ ಪ್ರೇಮಲೋಕದ ಬಗ್ಗೆ ಯಾರ ಬಳಿಯೂ ಏನೂ ಹೇಳಬೇಡ ಎಂದು ಅಪ್ಪಾ ಹೇಳಿದ್ದಾರೆ ಹಾಗಾಗಿ ನಾನು ಏನೂ ಹೇಳುವುದಿಲ್ಲ ಎಂದು ಮನೊರಂಜನ್ ಹಾರಿಕೆಯ ಉತ್ತರ ನೀಡುತ್ತಾರೆ. ರವಿಚಂದ್ರನ್ ಅವರನ್ನೇ ಕೇಳಿದರೆ ಅದ್ಯಾವುದಪ್ಪಾ ಹೊಸ ಪ್ರೇಮಲೋಕ? ಎಂದು ಮತ್ತೆ ಪ್ರಶ್ನೆ ಕೇಳಿದವರಿಗೇ ಮರುಪ್ರಶ್ನೆ ಹಾಕುತ್ತಾರೆ. ಅವರ ಗುಟ್ಟು ಸದ್ಯಕ್ಕೆ ಅವರಲ್ಲಿಯೇ ಇರಲಿ ಬಿಡಿ.