ಮಂಜು ಮುಸುಕಿದ ಹಾದಿಯಲ್ಲಿ ನಿಂತು ಕಣ್ಣೀರು ಸುರಿಸಲು ಅನುಪ್ರಭಾಕರ್ ಬರುತ್ತಿದ್ದಾರೆ. ಅನುಗೆ ಏನಾಯ್ತು ಅಂತ ಚಿಂತೆ ಮಾಡಬೇಡಿ. ಪ್ರಸ್ತುತ ಅವರು ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮಂಜು ಮುಸುಕಿದ ಹಾದಿ ಎಂದು ಧಾರಾವಾಹಿಯ ಹೆಸರು. ಧಾರಾವಾಹಿ ಎಂದಮೇಲೆ ಕಣ್ಣೀರ ಗೋಳು ಇರಲೇಬೇಕಲ್ಲ. ಅದೂ ಕೂಡಾ ಧಾರಾಳವಾಗಿ ಇದೆಯಂತೆ.
ಚಿತ್ರನಟಿಯರು, ನಾಯಕಿ ನಟಿಯರು ಹಿರಿತೆರೆಯಿಂದ ಕಿರುತೆರೆಗೆ ಹೋಗುವುದು ಇದೇನೂ ಹೊಸತಲ್ಲ. ಪದ್ಮಾ ವಾಸಂತಿ, ಸುಧಾರಾಣಿ, ವಿನಯಾ ಪ್ರಸಾದ್ ಹೀಗೆ ಅನೇಕ ಹಿರಿತೆರೆಯ ಮುಖಗಳೀಗ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಅನು ಪ್ರಭಾಕರ್ ಕೂಡಾ ಈಗ ಅದೇ ಪರೀಕ್ಷೆಗೆ ಹೊರಟಿದ್ದಾರೆ. ಈ ಹಿಂದೆ ನೂರು ದಿನಗಳು ಎಂಬ ಧಾರಾವಾಹಿಯಲ್ಲಿ ಅನು ನಟಿಸಿದ್ದರು. ಇದೀಗ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಮುಂಬೈ ಮೂಲದ ಮೊಹೆನಾ ಸಿಂಗ್ ಇದರ ನಿರ್ದೇಶಕರು. ಅವರಿಗೆ ಈ ಹಿಂದೆ ಕೆಲವು ಕನ್ನಡ ಸೇರಿದಂತೆ ಹಿಂದಿ ಸೀರಿಯಲ್‌ಗಳನ್ನು ನಿರ್ದೇಶನ ಮಾಡಿರುವ ಅನುಭವ ಇದೆಯಂತೆ.
ಈ ಧಾರಾವಾಹಿಗೆ ಪ್ರದೀಪ್ ಬೆಳವಾಡಿ ಚಿತ್ರಕಥೆ ಬರೆಯುತ್ತಿದ್ದಾರೆ. ಇನ್ನೇನಿದ್ದರೂ ಅನು ಪ್ರಭಾಕರ್ ಕಣ್ಣೀರಿನ ಕೋಡಿ ನೋಡಲು ಕಿರುತೆರೆ ಪ್ರೇಕ್ಷಕರು ರೆಡಿಯಾಗಿರಬೇಕಷ್ಟೇ.