ಶ್ರೀ ಸಾಯಿ ಕಂಬೈನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಸ್ವಯಂವರ' ಚಿತ್ರದ ಚಿತ್ರೀಕರಣ ಮುಕ್ತಾಯವಾದ ಬೆನ್ನಲ್ಲೇ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಮಾತುಗಳ ಜೋಡಣೆ ಆರಂಭವಾಗಿದೆ ಎಂದು ಚಿತ್ರದ ನಿರ್ಮಾಪಕ ಎಂ.ಚಂದ್ರು ತಿಳಿಸಿದ್ದಾರೆ.
ಕರ್ನಾಟಕದ ರಮಣೀಯ ಸ್ಥಳಗಳು ಸೇರಿದಂತೆ ದೂರದ ಬ್ಯಾಂಕಾಕಿನಲ್ಲೂ ಚಿತ್ರೀಕರಣಗೊಂಡಿರುವ ಈ ಚಿತ್ರವನ್ನು ಅನಂತರಾಜು ನಿರ್ದೇಶಿಸುತ್ತಿದ್ದಾರೆ. ವಿಭಿನ್ನ ಕಥಾ ಹಂದರ ಹೊಂದಿರುವ ಈ ಚಿತ್ರ ಜನರ ಪ್ರಶಂಸೆಗೆ ಪಾತ್ರವಾಗಲಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.
ಇದರಲ್ಲಿ ಶ್ರೀನಗರ ಕಿಟ್ಟಿ ಮತ್ತು ದಿಗಂತ್ ನಾಯಕರುಗಳಾಗಿ ನಟಿಸುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದ ಉಳಿದ ತಾರಾಬಳಗದಲ್ಲಿ ತಾರಾ, ಓಂಪ್ರಕಾಶ್ ರಾವ್ ಮುಂತಾದವರಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ, ಎಚ್.ಸಿ ವೇಣು ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಹಾಗೂ ಪಳನಿರಾಜ್ ಅವರ ಸಾಹಸ ಈ ಚಿತ್ರಕ್ಕಿದೆ.