15 ವರ್ಷಗಳ ದಾಂಪತ್ಯದ ಬಳಿಕ ಪ್ರಕಾಶ್ ರೈ- ಲಲಿತಾ ದಂಪತಿ ವಿಚ್ಛೇದನ!
WD
ಕನ್ನಡಿಗರ ಹೆಮ್ಮೆಯ ರಾಷ್ಟ್ರಪ್ರಶಸ್ತಿ ವಿಜೇತ ನಟ ಪ್ರಕಾಶ್ ರೈ ಕೊನೆಗೂ ತಮ್ಮ ಪತ್ನಿ ಲಲಿತಾರಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ಚೈನ್ನೈಯ ಕೌಟುಂಬಿಕ ನ್ಯಾಯಾಲಯ ಪ್ರಕಾಶ್ ರೈ ಹಾಗೂ ಲಲಿತಾ ದಂಪತಿಗಳಿಗೆ ಬುಧವಾರ ವಿವಾಹ ವಿಚ್ಛೇದನ ನೀಡಿದೆ.
ಡಿಸ್ಕೋ ಶಾಂತಿಯ ಸಹೋದರಿ, ನಟಿ ಲಲಿತಾ ಕುಮಾರಿಯನ್ನು ಪ್ರಕಾಶ್ ರೈ 1994ರಲ್ಲಿ ಮದುವೆಯಾಗಿದ್ದರು. 15 ವರ್ಷಗಳ ಕಾಲ ಲಲಿತಾ ಜತೆಗೇ ಸಂಸಾರ ಮಾಡಿದ ಪ್ರಕಾಶ್ ರೈ ಫ್ಯಾಮಿಲಿ ಮ್ಯಾನ್ ಎಂಬ ಇಮೇಜ್ ಕೂಡಾ ಹೊಂದಿದ್ದರು. ಆದರೆ ಈಗ ಆ ಇಮೇಜ್ ಮುರಿದು ಬಿದ್ದಿದೆ. ಕಳೆದೊಂದು ವರ್ಷದಿಂದಲೇ ಇವರಿಬ್ಬರ ನಡುವಿನ ವಿರಸ ತಾರಕಕ್ಕೇರಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ಈ ಹಿಂದೆ ರೈ ದಂಪತಿಗಳನ್ನು ಒಂದು ಮಾಡಲು ವಕೀಲರು ಕೂಡಾ ಕಾನೂನನ್ನು ನೋಡದೆ ಶ್ರಮಿಸಿದ್ದರು. ಸಾಕಷ್ಟು ಪ್ರಯತ್ನವನ್ನೂ ಪಟ್ಟಿದ್ದರು. ಲಲಿತಾ ಅವರ ಸಹೋದರಿ ಡಿಸ್ಕೋ ಶಾಂತಿ ಕೂಡಾ ಇವರಿಬ್ಬರ ನಡುವಿನ ವಿರಸವನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದರು. ಆದರೆ ಕೊನೆಗೂ ಪ್ರಯತ್ನವೆಲ್ಲ ನೀರಿನಲ್ಲಿ ಮಾಡಿದ ಹೋಮದಂತಾಗಿದೆ. ಅಂತಿಮವಾಗಿ ಇವರಿಬ್ಬರ ವಿರಸ ಬುಧವಾರ ವಿಚ್ಛೇದನಗೊಳ್ಳುವ ಮೂಲಕ ಅಧಿಕೃತವಾಗಿದೆ.
ವಿಚ್ಛೇದನ ಸಂದರ್ಭ ಮಾಡಿಕೊಂಡ ಒಡಂಬಡಿಕೆ ಪ್ರಕಾರ ಪ್ರಕಾಶ್ ರೈ ತಮ್ಮ ಮಕ್ಕಳ ಪೋಷಣೆಗಾಗಿ ಪ್ರತಿ ತಿಂಗಳು ಹಣ ಕೊಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಲಲಿತಾ ಅವರು ತನಗೆ ಪ್ರತಿ ತಿಂಗಳು 2 ಲಕ್ಷ ರೂಪಾಯಿ ಜೀವನಾಂಶ ನೀಡಬೇಕೆಂದು ಅರ್ಜಿಯಲ್ಲಿ ಬೇಡಿಕೆಯಿಟ್ಟಿದ್ದರು. ಪ್ರಕಾಶ್ ರೈ ತನ್ನ ಮಕ್ಕಳನ್ನು ತನ್ನ ಸುಪರ್ದಿಗೆ ಒಪ್ಪಿಸಬೇಕೆಂದು ಕೋರಿದ್ದರು. ಆದರೆ, ಮಕ್ಕಳನ್ನು ಲಲಿತಾ ಅವರಿಗೆ ಒಪ್ಪಿಸಲಾಗಿದೆ. ಆದರೆ, ಇದು ಇಬ್ಬರೂ ಸಹಮತದಿಂದ ಮಾಡಿಕೊಂಡ ಒಪ್ಪಂದ. ಇಬ್ಬರೂ ಯೋಚಿಸಿ ಕೈಗೊಂಡ ನಿರ್ಧಾರ ಎಂದು ಪ್ರಕಾಶ್ ರೈ ಸ್ಪಷ್ಟಪಡಿಸಿದ್ದಾರೆ.