ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಆಟೋ ಚಾಲಕರಾಗಿದ್ದಾರೆ. ಆಶ್ಚರ್ಯ ಪಡಬೇಡಿ. ಸ್ವತಃ ದರ್ಶನ್ ಅವರ ಸಹೋದರನಾದ ದಿನಕರ ತೂಗುದೀಪ ಅವರು ನಿರ್ದೇಶಿಸುತ್ತಿರುವ ಹೊಸ ಚಿತ್ರ ಸಾರಥಿಯಲ್ಲಿ ಸ್ವತಃ ಆಟೋ ಸಾರಥ್ಯ ವಹಿಸುವ ಮೂಲಕ ಆಟೋ ಚಾಲಕರಾಗಿ ಅಭಿನಯಿಸುತ್ತಿದ್ದಾರೆ.
ಇದೇ ಮೊದಲ ಬಾರಿಗೆ ದರ್ಶನ್ ಒಬ್ಬ ಆಟೋ ಚಾಲಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಥೆ ಕೇಳಿ ದರ್ಶನ್‌ಗೆ ತುಂಬಾ ಇಷ್ಟವಾಯಿತಂತೆ. ಯಾವ ಚಿತ್ರಕ್ಕೂ ಡೇಟ್ ನೀಡದೆ, ಈ ಚಿತ್ರವೇ ಮೊದಲಾಗಲಿ ಎಂಬ ದರ್ಶನ್ ಬೇಡಿಕೆಗೆ ದಿನಕರ್ ಹಾಗೂ ನಿರ್ಮಾಪಕ ಕೆ.ಸಿ.ಎನ್. ಚಂದ್ರಶೇಖರ್ ಎಲ್ಲಾ ಸಿದ್ಧತೆ ಮಾಡಿಕೊಂಡು ನೇರವಾಗಿ ಫೀಲ್ಡಿಗೆ ಇಳಿದಿದ್ದಾರೆ.
ಕೆಸಿಎನ್ ಈ ಮೊದಲು ಭೂಪತಿ ಚಿತ್ರದ ನಿರ್ದೇಶಕರಾಗಿದ್ದರು. ಈಗ ಮತ್ತೆ ಸಾರಥಿ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ. ಭೂಪತಿ ಬಳಿಕ ಚಿತ್ರ ಮಾಡುವುದಾದರೆ ದರ್ಶನ್ ಸಿನಿಮಾವನ್ನೇ ಎಂದುಕೊಂಡಿದ್ದ ಅವರಿಗೆ ದಿನಕರ್ ಸಾಥ್ ನೀಡಿದ ಬಗ್ಗೆ ಖುಷಿಯಿದೆ.
ಮುಖ್ಯವಾಗಿ ಈ ಚಿತ್ರದಲ್ಲಿ ಆಕ್ಷನ್, ಮೆಲೋಡ್ರಾಮ ಹಾಗೂ ಸೆಂಟಿಮೆಂಟ್ ಜತೆಗೆ ಲವ್ ಕೂಡ ಚಿತ್ರದಲ್ಲಿದೆ. ಚಿತ್ರಕ್ಕಿನ್ನೂ ನಾಯಕಿಯ ಆಯ್ಕೆಯಾಗಬೇಕಿದೆ. ಸದ್ಯಕ್ಕೆ ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ನಟಿಸಿದ್ದ ಮಂಜುಳಾ ಅಭಿನಯಿಸಿರುವ ಬಜಾರಿಯಂತ ಪಾತ್ರಕ್ಕಾಗಿ ಚಿತ್ರರಂಗದಲ್ಲಿ ಹುಡುಕುತ್ತಿದ್ದಾರೆ ನಿರ್ದೇಶಕರು. ಅದೂ ಕನ್ನಡತಿಯನ್ನೇ ಎಂದಿದ್ದಾರೆ ಅವರು. ಯಾರೂ ಬರುತ್ತಾರೆ ಕಾದು ನೋಡಬೇಕು.