ತನ್ನ ಮಗ ಮನೋರಂಜನ್‌ಗಾಗಿ ರವಿಚಂದ್ರನ್ ತನ್ನದೇ ಅಭಿನಯದ ಪ್ರೇಮಲೋಕ ಚಿತ್ರವನ್ನು ರಿಮೇಕ್ ಮಾಡುತ್ತಾರೆಂಬ ಗುಲ್ಲು ಅದ್ಹೇಗೋ ರಾತ್ರೋರಾತ್ರಿ ಗಾಂಧಿನಗರದಿಂದ ಸುದ್ದಿ ಹಬ್ಬಲು ಆಱಂಭವಾಗಿತ್ತು. ಪತ್ರಿಕೆಗಳಲ್ಲೂ ಸುದ್ದಿಯಾಯಿತು. ಹಲವರು ಒಳ್ಳೆಯದೆಂದರೆ ಇನ್ನೂ ಹಲವರು ಬೇಡಪ್ಪಾ ಬೇಡ, ಪ್ರೇಮಲೋಕವನ್ನು ಮತ್ತೆ ಮಾಡಿ ಹಳೆಯದಕ್ಕೆ ಮಸಿ ಬಳಿಯಬೇಡಿ ಎಂದಿದ್ದರು. ಅದೇನಾಯಿತೋ ಏನೋ, ಈಗ ರವಿಚಂದ್ರನ್ 'ನಾನು ಪ್ರೇಮಲೋಕದ ರಿಮೇಕ್ ಮಾಡಲಾರೆ' ಎಂದು ರಾಗ ಹಾಡಿದ್ದಾರೆ.
'ನಾನು ಪ್ರೇಮಲೋಕದ ರಿಮೇಕ್ ಮಾಡುತ್ತೇನೆ ಎಂದು ಹೇಳೇ ಇಲ್ಲ. ಅದೆಲ್ಲಿಂದ ಹೇಗೆ ಈ ಸುದ್ದಿ ಹಬ್ಬಿತೋ ಗೊತ್ತಿಲ್ಲ' ಎಂದು ರವಿಚಂದ್ರನ್ ಕೈಚೆಲ್ಲುತ್ತಾರೆ. 'ಪ್ರೇಮಲೋಕ ಚಿತ್ರ ಒಂದು ಕ್ಲಾಸಿಕ್. ಇಂತಹ ಕ್ಲಾಸಿಕ್ ಚಿತ್ರದ ರಿಮೇಕ್ ಮಾಡಲು ಖಂಡಿತಾ ಸಾಧ್ಯವಿಲ್ಲ. ಈ ಚಿತ್ರದ ರಿಮೇಕ್ ಮಾಡಿ ಆ ಚಿತ್ರದ ಘನತೆ, ಗೌರವಕ್ಕೆ ಕುಂದು ತರಲಾರೆ. ಪ್ರೇಮಲೋಕವನ್ನು ನಾನು ಮತ್ತೆ ಮುಟ್ಟಲು ಹೋಗೋದಿಲ್ಲ. ಅದು ಹಾಗಿದ್ದರೇ ಚೆನ್ನ' ಎಂದು ರವಿಚಂದ್ರನ್ ವಿವರಿಸಿದರು.
ಹಾಗಾದರೆ, ನಿಮ್ಮ ಮಗ ಮನೋರಂಜನ್ ಹೊಸ ಚಿತ್ರದ ನಾಯಕ ಎಂದು ಹೇಳಿಯೇ ವರ್ಷವಾಗುತ್ತಾ ಬಂತಲ್ಲ, ಯಾಕೆ ಇನ್ನೂ ಮಗನಿಗಾಗಿ ಚಿತ್ರ ತಂದಿಲ್ಲ? ಎಂದರೆ ರವಿಚಂದ್ರನ್ ದೀರ್ಘವಾಗಿ ಆಲೋಚಿಸಿ, 'ಈ ವಿಷಯ ಅಷ್ಟು ಸರಳವಲ್ಲ. ಇಂತಹ ಕೆಲಸಗಳೆಲ್ಲ ತುಂಬ ಸಮಯ ತೆಗೆದುಕೊಳ್ಳುತ್ತವೆ. ನಾನು ನನ್ನ ಮಗನ ಮೂಲಕ ಕನ್ನಡ ಚಿತ್ರರಂಗದಲ್ಲಿ ನನ್ನ ಸ್ಥಾನ ತುಂಬಿಸಬೇಕೆಂದಿದ್ದೇನೆ. ನನ್ನ ಮಗನ ಮೊದಲ ಚಿತ್ರ ಅತ್ಯುತ್ತಮವಾಗಿ ಮೂಡಿಬರಬೇಕು. ಅದು ನನ್ನ ಮೊದಲ ಚಿತ್ರದ ಹಾಗಿರಬೇಕು. ಅಷ್ಟೇ ಅಲ್ಲ, ಪ್ರೇಮಲೋಕ ಚಿತ್ರದ ಥರ ಯಶಸ್ಸಾಗಬೇಕು. ಅಷ್ಟೇ ಅಲ್ಲ, ಆ ಚಿತ್ರದಲ್ಲಿ ಯುವ ಮನಸ್ಸನ್ನು ತಾಕುವ ಅಂಶ ಹೊಂದಿರಬೇಕು ಜೊತೆಗೆ ರೊಮ್ಯಾಂಟಿಕ್ ಲವ್ ಸ್ಟೋರಿಯಂತೂ ಆಗಿರಲೇಬೇಕು. ಹಾಗಾಗಿ ಉತ್ತಮ ಕಥೆಯ ಅಗತ್ಯವಿರೋದ್ರಿಂದ ಆ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದೇವೆ' ಎಂದರು ರವಿಚಂದ್ರನ್.
ಸದ್ಯ ಮನೋರಂಜನ್ ಏನು ಮಾಡುತ್ತಿದ್ದಾನೆ? ಎಂದರೆ ರವಿಚಂದ್ರನ್ ಹೇಳೋದು ಹೀಗೆ, 'ಮನೋರಂಜನ್ ಈಗ ಎ.ಎಸ್.ಮೂರ್ತಿ ಅವರಲ್ಲಿ ನಟನಾ ತರಬೇತಿ ಪಡೆಯುತ್ತಿದ್ದಾನೆ. ಅದರ ಜೊತೆಜೊತೆಗೇ ನಾನು ಆತನಿಗೆ ಬಾಡಿ ಲ್ಯಾಂಗ್ವೇಜ್ ಚಿತ್ರದಲ್ಲಿ ಹೇಗಿರಬೇಕೆಂದು ಹೇಳುತ್ತಿರುತ್ತೇನೆ. ಉತ್ತಮ ಬಾಡಿ ಲ್ಯಾಂಗ್ವೇಜ್, ಉತ್ತಮ ದೇಹದಾರ್ಢ್ಯತೆ, ನಟನೆ ಈ ಮೂರಕ್ಕೂ ಗಮನ ಕೊಡಲು ನಾನು ಆಗಾಗ ಹೇಳ್ತಾನೇ ಇರ್ತೇನೆ. ಜೊತೆಗೆ ಆತ ಈಗ ಡ್ಯಾನ್ಸ್ ಕೂಡಾ ಕಲೀತಿದಾನೆ. ಇದೆಲ್ಲ ಸರಿಯಾಗಿ ಉತ್ತಮ ಚಿತ್ರ ಕೂಡಿಬಂದರೆ ಖಂಡಿತಾ ಆತ ನಟಿಸುತ್ತಾನೆ. ಆಗ ನಾನೇ ಹೇಳುತ್ತೇನೆ' ಎನ್ನುತ್ತಾರೆ ರವಿಚಂದ್ರನ್.
ನಟರ ಮಕ್ಕಳೆಲ್ಲಾ ಮುಂಬೈಗೆ ಹೋಗಿ ನಟನಾ ತರಬೇತಿ ಕಲಿತು ಬರುತ್ತಾರಲ್ಲಾ, ನಿಮ್ಮ ಮಗನನ್ಯಾಕೆ ಮುಂಬೈಗೆ ಕಳುಹಿಸಿಲ್ಲ? ಎಂದು ಕೇಳಿದರೆ ರವಿಚಂದ್ರನ್, 'ಮುಂಬೈಗೆ ನಟನೆ ಕಲಿಯಲು ಹೋದರೆ, ನಟನೆಗಿಂತ ಹೆಚ್ಚು ಗತ್ತು, ಅಹಂಕಾರವನ್ನೇ ಕಲಿತು ಬರತ್ತಾರೆ. ನಟನೆಯ ಗಂಧವೇನೂ ಕಲಿಯೋದಿಲ್ಲ. ಅದು ನನ್ನ ಮಗನಿಗೆ ಬೇಕಾಗಿಲ್ಲ' ಎನ್ನುತ್ತಾರೆ ಈ ಕ್ರೇಜಿ ಸ್ಟಾರ್.