ಚಿತ್ರಗಳ ಪ್ರಮೋಷನ್‌ಗಾಗಿಯೇ ಹಾಡನ್ನು ಚಿತ್ರೀಕರಿಸುವುದು ಮತ್ತು ವಿಡಿಯೋ ಸಾಂಗ್ ರೂಪದಲ್ಲಿ ಹೊರತರುವುದು ಹಿಂದಿ ಚಿತ್ರರಂಗದ ಈಗಿನ ಟ್ರೆಂಡ್ . ಈ ಹಾಡಿನಲ್ಲಿ ದೃಶ್ಯಗಳಿರುತ್ತವೆ. ಆದರೆ ಅದೇ ಹಾಡು ಆ ಚಿತ್ರದಲ್ಲಿ ಮಾತ್ರ ಇರೋದಿಲ್ಲ.
ಪ್ರಪ್ರಥಮ ಬಾರಿಗೆ ಕನ್ನಡದಲ್ಲಿ ಇಂಥದ್ದೊಂದು ಸಾಹಸ ಮಾಡಿದ್ದಾರೆ ನಿರ್ದೇಶಕ ಪ್ರಕಾಶ್. ಈ ವಾರ ತೆರೆಗೆ ಬರುತ್ತಿರುವ ತಮ್ಮ ಚಿತ್ರ `ಗೋಕುಲ'ದ ಪ್ರಚಾರಕ್ಕಾಗಿ ಅವರು ಒಂದು ಹಾಡನ್ನು ಶೂಟ್ ಮಾಡಿದ್ದಾರೆ. ಅದರ ವಿಡಿಯೋ ಈಗ ಕಿರುತೆರೆಯಲ್ಲಿ ಪದೇ ಪದೇ ಪ್ರಸಾರವಾಗುತ್ತಿದೆ.
ಇದು 'ಗೋಕುಲ' ಚಿತ್ರದ 'ಆರಾಮಾಗಿ ಇದ್ದೆ ನಾನು...' ಮೂಲ ಹಾಡಿನ ರಿಮಿಕ್ಸ್ ಗೀತೆ. ಈ ಹಾಡಿನಲ್ಲಿ ಕಲಾವಿದರಿಂದ ಹಿಡಿದು ಚಿತ್ರದ ತಂತ್ರಜ್ಞರವರೆಗೂ ಬಂದು ಹೋಗುತ್ತಾರೆ. ಆರಂಭದಲ್ಲಿ ವಿಜಯ ರಾಘವೇಂದ್ರ, ಪೂಜಾ ಗಾಂಧಿ, ಯಶ್, ಪವನ್ ಮೊದಲಾದವರು ಕಾಣಿಸಿಕೊಳ್ಳುತ್ತಾರೆ. ಆನಂತರ ಹಿರಿಯ ಕಲಾವಿದರು, ಕೊನೆಕೊನೆಯಲ್ಲಿ ನಿರ್ದೇಶಕರು, ಕ್ಯಾಮರಾಮನ್ ಸತ್ಯ ಹೆಗೆಡೆ ಸೇರಿದಂತೆ ಚಿತ್ರಕ್ಕೆ ದುಡಿದ ಹುಡುಗರು ಸಹ ಹಾಡಿನಲ್ಲಿ ಬಂದು ಹೋಗುತ್ತಾರೆ.
ಈ ರಿಮಿಕ್ಸ್ ಹಾಡು ಚಿತ್ರದ ಆಡಿಯೋದಲ್ಲಿದೆ. ಆದರೆ ಚಿತ್ರದಲ್ಲಿಲ್ಲ. ಒಂದು ವೇಳೆ ಬಂದರೂ ಅದು ಚಿತ್ರದ ಅಂತಿಮ ಟೈಟಲ್ ಕಾರ್ಡಿನಲ್ಲಷ್ಟೇ. ಇನ್ನೇನು ಕೆಲವೇ ದಿನಗಳಲ್ಲಿ 'ಗೋಕುಲ' ಚಿತ್ರಮಂದಿರಕ್ಕೆ ಬರಲಿದೆ.