ಚಿತ್ರನಟಿ ರಾಧಿಕಾಗೆ ಮೊನ್ನೆ ಸೋಮವಾರ ನವೆಂಬರ್ 23ರ ಸಂಜೆ ಹೆಣ್ಣು ಮಗುವಾಗಿದೆಯಂತೆ. ಹಾಗಂತ ಗುಲ್ಲು ಹಬ್ಬಿದೆ. ಇದು ಸುಳ್ಳೋ ಎಂದು ಅನುಮಾನ ಪಡುವ ಹಾಗೂ ಇಲ್ಲ, ಯಾಕೆಂದರೆ, ಆಸ್ಪತ್ರೆಯ ಮೂಲಗಳಿಂದಲೇ ಮಾಧ್ಯಮದ ಮಂದಿಗೆ ಸುಳಿವು ದೊರೆತುದೂ ಆಗಿದೆ.
ಬೆರಳೆಣಿಕೆಯಷ್ಟೇ ವರ್ಷಗಳಲ್ಲಿ ಚಿತ್ರರಂಗದಲ್ಲಿದ್ದರೂ, ಚಿತ್ರರಂಗ ತೊರೆದ ಮೇಲೂ ಸುದ್ದಿಯಾದುದು ರಾಧಿಕಾ ಏಕೈಕ ಕಾರಣಕ್ಕೆ. ಅದು ಯಾಕೆ, ಏನೆಂದು ವಿವರಿಸಬೇಕಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆಗೆ ರಾಧಿಕಾಗೆ ಸಂಬಂಧವಿದೆ ಎಂಬ ಅಂತೆಕಂತೆಗಳು ಇಂದು ನಿನ್ನೆಯವಲ್ಲ. ಜೊತೆಗೆ ಹಿಂದೆ ರಾಧಿಕಾ ಮಂಗಳೂರಿನಲ್ಲಿ ಆಸ್ಪತ್ರೆಯಲ್ಲಿದ್ದಾಗ ಗುಟ್ಟಾಗಿ ಆಕೆಯ ಆರೋಗ್ಯ ವಿಚಾರಿಸಲು ಕುಮಾರಸ್ವಾಮಿ ದಿಢೀರ್ ಭೇಟಿಕೊಟ್ಟಿದ್ದಾರೆಂದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಅಷ್ಟೇ ಅಲ್ಲ, ರಾಧಿಕಾ ಮಾಡಿದ ನಾಗಮಂಡಲದಲ್ಲೂ ಕುಮಾರಸ್ವಾಮಿ ಭಾಗವಹಿಸಿದ್ದುದು ಈ ಎಲ್ಲ ಅಂತೆಕಂತೆಗಳಿಗೆ ಪುಷ್ಠಿ ನೀಡಿತ್ತು.
ಅದೇನೇ ಇರಲಿ. ರಾಧಿಕಾ ಹಲವು ತಿಂಗಳುಗಳಿಂದ ಬುರ್ಖಾ ಧರಿಸಿ ಆಸ್ಪತ್ರೆಗೆ ತನ್ನ ಆರೋಗ್ಯ ತಪಾಸಣೆಗೆ ಹೋಗುತ್ತಿದ್ದರೆಂದೂ, ಆಕೆ ಗರ್ಭಿಣಿಯೆಂದು ಮಾಧ್ಯಮಗಳಲ್ಲಿ ಮತ್ತೆ ಸುದ್ದಿಯಾಗಿತ್ತು. ಈಗ ಮತ್ತೊಂದು ಸುದ್ದಿ ಹೊರಬಿದ್ದಿದೆ. ರಾಧಿಕಾ ಜಯನಗರದ ಕ್ರೆಡಲ್ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಗಿ ಖಾಸಗಿ ಟಿವಿ ಚಾನಲ್ ಒಂದು ವರದಿ ಮಾಡಿದೆ. ರಾಧಿಕಾಗೆ ಹೆರಿಗೆಯಾಗಿದೆ ಎಂದು ತಿಳಿದಾಕ್ಷಣ ಮಾಧ್ಯಮಗಳ ಪ್ರತಿನಿಧಿಗಳು ಕ್ರೆಡೆಲ್ ಆಸ್ಪತ್ರೆಯತ್ತ ದೌಡಾಯಿಸಿದರೂ ರಾಧಿಕಾ ಮುಖದರ್ಶನವಾಗಿಲ್ಲ. ರಾಧಿಕಾರ ಆಪ್ತರು ಆಕೆಗೆ ಹೆರಿಗೆಯಾದ ವಿಷಯ ಎಲ್ಲೂ ಗೊತ್ತಾಗಬಾರದು ಹಾಗೂ ಯಾರನ್ನೂ ಒಳಗೆ ಬಿಡಬಾರದು ಎಂದು ಮೊದಲೇ ಆಸ್ಪತ್ರೆಯ ಸಿಬ್ಬಂದಿಗಳಿಗೆ ತಾಕೀತು ಮಾಡಿದ್ದರು. ಹೀಗಾಗಿ ಮಾಧ್ಯಮದ ಪ್ರತಿನಿಧಿಗಳನ್ನು ಆಸ್ಪತ್ರೆಯ ಒಳಕ್ಕೆ ಬಿಡಲೇ ಇಲ್ಲ. ಎಲ್ಲರೂ ಪೆಚ್ಚುಮೋರೆಯಿಂದ ವಾಪಸ್ಸಾಗಬೇಕಾಯಿತಂತೆ.