ಪ್ರಕಾಶ್ ರೈಯ ನಾನು ನನ್ನ ಕನಸಿನಿಂದ ರಮ್ಯಾ ಔಟ್! ಅಮೂಲ್ಯಾ ಇನ್!
MOKSHA
ವಿವಾದಕ್ಕೇ ಹೆಸರಾದ ನಟಿ ರಮ್ಯಾ, ಪ್ರಕಾಶ್ ರೈ ನಿರ್ದೇಶಿಸುತ್ತಿರುವ ಚಿತ್ರದಿಂದ ಆಹ್ವಾನ ಬಂದಿದ್ದಕ್ಕೆ ಖುಷಿ ಪಟ್ಟಿದ್ದೇ ಪಟ್ಟಿದ್ದು. ಆ ಖುಷಿ ಹೆಚ್ಚು ದಿನ ಉಳಿದಿಲ್ಲ. ರಮ್ಯಾಳ ಸಂಭಾವನೆ ಹಠಕ್ಕೆ ಜಗ್ಗದ ನಿರ್ಮಾಪಕರು ಆಕೆಗೆ ಗೇಟ್‌ಪಾಸ್ ಕೊಟ್ಟಿದ್ದಲ್ಲದೆ, ಆಕೆಯ ಜಾಗಕ್ಕೆ ಅಮೂಲ್ಯಳನ್ನು ತಂದು ಕೂರಿಸಿದ್ದಾರೆ!
ಹೌದು. ಪ್ರಕಾಶ್ ರೈ ನಿರ್ದೇಶನದಲ್ಲಿ ಹೊರಬರುತ್ತಿರುವ 'ನಾನು ನನ್ನ ಕನಸು' ಕನ್ನಡ ಚಿತ್ರದಿಂದ ರಮ್ಯ ಹೊರಬಿದ್ದಿದ್ದಾರೆ. ಸಂಭಾವನೆ ಕುರಿತಂತೆ ರಮ್ಯಾಳ ಬೇಡಿಕೆಗೆ ಸ್ಪಂದಿಸಲು ರೆಡಿಯಿಲ್ಲದ ನಿರ್ಮಾಪಕರು ರಮ್ಯಾಳ ಅಮೂಲ್ಯವಾದ ಪಾತ್ರಕ್ಕೆ ಚೆಲುವಿನ ಚಿತ್ತಾರ ಖ್ಯಾತಿಯ ಅಮೂಲ್ಯ ಎಂಬ ಅಮುಲ್ ಬೇಬಿಯನ್ನು ಆಯ್ಕೆ ಮಾಡಿದ್ದಾರೆ.
ಬಿ.ಸುರೇಶ್ ಹಾಗೂ ಶೈಲಜಾ ನಾಗ್ ನಿರ್ಮಾಣದಲ್ಲಿ ಹೊರಬರುತ್ತಿರುವ ನಾನು ನನ್ನ ಕನಸು ಚಿತ್ರ ನವೆಂಬರ್ 21ರಂದು ಸೆಟ್ಟೇರಿತ್ತು. ಪ್ರಕಾಶ್ ರೈ ಹಾಗೂ ರಮ್ಯಾ ತಾರಾಗಣವಿರುವ ಈ ಚಿತ್ರದ ಬಗ್ಗೆ ರಮ್ಯ ಅಪಾರ ಕನಸು ಹೊತ್ತಿದ್ದರು. ಅಪ್ಪ ಮಗಳ ನಡುವಿನ ಭಾವನಾತ್ಮಕ ಕಥಾ ಹಂದರವಿರುವ ಈ ಚಿತ್ರದಲ್ಲಿ ಮಗಳ ಪಾತ್ರಕ್ಕೆ ರಮ್ಯಾ ಆಯ್ಕೆಯಾಗಿದ್ದರು ಹಾಗೂ ಪ್ರಕಾಶ್ ರೈ ನಿರ್ದೇಶನದಲ್ಲಿ ತಾನು ನಟಿಸುತ್ತಿರುವ ಬಗ್ಗೆ ಪುಂಖಾನುಪುಂಖ ಸಂತಸದ ಲಹರಿಯನ್ನೇ ಹರಿಸಿದ್ದರು. ಅಪ್ಪನಾಗಿ ಪ್ರಕಾಶ್ ರೈ ಅವರೇ ಬಣ್ಣ ಹಚ್ಚಲಿದ್ದರು. ಆದರೀಗ ಅದು ಈ ಮೂಲಕ ಸುಳ್ಳಾಗಿದೆ. ರಮ್ಯಾ ಸ್ಥಾನದಲ್ಲಿ ಅಮೂಲ್ಯ ಬಂದಿರೋದ್ರಿಂದ ಚಿತ್ರದ ನಾಯಕಿಯಾಗಿ ಹಾಗೂ ಚಿತ್ರದಲ್ಲಿ ಪ್ರಕಾಶ್ ರೈ ಮಗಳಾಗಿ ನಟಿಸುವ ಅಮೂಲ್ಯ ಅವಕಾಶವನ್ನು ಅಮೂಲ್ಯ ಗಿಟ್ಟಿಸಿಕೊಂಡಿದ್ದಾರೆ.
MOKSHA
ನಿರ್ಮಾಪಕಿ ಶೈಲಜಾ ನಾಗ್ ಹೇಳುವಂತೆ, ರಮ್ಯಾ ಈ ಚಿತ್ರದಲ್ಲಿ ನಟಿಸಲು ಹೆಚ್ಚು ಸಂಭಾವನೆ ಕೇಳತೊಡಗಿದರು. ಅದಕ್ಕಿಂತ ಹೆಚ್ಚಾಗಿ ಅವರು ಮಾತನಾಡುವ ಶೈಲಿ ಹಾಗೂ ಅವರು ಕೇಳುವ ವಿಧಾನ ಸರಿಯಿರಲಿಲ್ಲ. ನಾಳೆಯಿಂದ (ಡಿ.2) ಚಿಕ್ಕಮಗಳೂರಿನ ಶನಿವಾರಸಂತೆ ಬಳಿ ಶೂಟಿಂಗ್ ಆರಂಭವಾಗಬೇಕಿದೆ. ಈವರೆಗೆ ಆಕೆಗೆ ಕರೆ ಮಾಡಿದರೂ ಆಕೆ ನಾಟ್ ರೀಚೆಬಲ್! ನಾವು, ಪ್ರಕಾಶ್ ರೈ ಎಲ್ಲರೂ ಆಖೆಗೆ ಕಾಲ್ ಮಾಡಿ ಮಾಡಿ ಸಾಕುಸಾಕಾಯಿತು. ವಿಮಾನ ಟಿಕೆಟ್‌ಗಳು ಕೂಡಾ ಬುಕ್ ಆಗಿತ್ತು. ಆದರೂ ಆಕೆಯ ಪತ್ತೆಯಿಲ್ಲ. ಇಷ್ಟೆಲ್ಲಾ ಆದ ಮೇಲೆ ನಾವು ನಮ್ಮ ನಿರ್ಧಾರ ಬದಲಾಯಿಸಲು ಯೋಚಿಸಿದೆವು. ರಮ್ಯಾಳ ಜಾಗಕ್ಕೆ ಸದ್ಯದ ಸೆನ್ಸೇಶನಲ್ ನಟಿ ಅಮೂಲ್ಯರನ್ನು ಹಾಕಲು ನಿನ್ನೆ ಸಂಜೆ ತೀರ್ಮಾನಿಸಿದೆವು. ಆಕೆಗೆ ಕರೆ ಮಾಡಿದಾಗ ಆಕೆ ಒಪ್ಪಿದರು. ಆಕೆ ಡೇಟ್ಸ್ ಕೂಡಾ ನೀಡಿದ್ದು ಚಿತ್ರೀಕರಣದ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಹಾಗಾಗಿ ನಾಳೆಯಿಂದಲೇ ಅಮೂಲ್ಯ ನಮ್ಮ ಜೊತೆಗೆ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ ಎಂದರು.
ಆದರೆ ಈ ವಿಚಾರಕ್ಕೆ ಪ್ರತಿಕ್ರಿಯಿಸಲು ರಮ್ಯಾ ಮಾತ್ರ ಸಿಗಲಿಲ್ಲ. ಮೂಲಗಳ ಪ್ರಕಾರ ರಮ್ಯಾ ಈ ಚಿತ್ರದ ನಟನೆಗೆ 32 ಲಕ್ಷ ರೂಪಾಯಿಗಳ ಸಂಭಾವನೆ ಕೇಳಿದ್ದರೆಂದೂ, ನಾನು ನನ್ನ ಕನಸು ನಿರ್ಮಾಪಕರು ಆಕೆಗೆ 16 ಲಕ್ಷ ಮಾತ್ರ ಕೊಡಲು ಒಪ್ಪಿದ್ದರೆಂದೂ ಹೇಳಲಾಗುತ್ತಿದೆ. ಈ ಮೂಲಕ ರಮ್ಯಾ ರಾಷ್ಟ್ರಪ್ರಶಸ್ತಿ ವಿಜೇತ ಪ್ರಬುದ್ಧ ಅನುಭವಿ ನಟ ಪ್ರಕಾಶ್ ರೈ ಅವರೊಂದಿಗೆ ನಟಿಸುವ ಉತ್ತಮ ಅವಕಾಶವನ್ನು ದುರದೃಷ್ಟವಶಾತ್ ಕಳೆದುಕೊಂಡಿದ್ದಾರೆ. ರಮ್ಯಾ ಕಿರಿಕ್ ಜಸ್ಟ್ ಮಾತ್ ಮಾತಿನಲ್ಲೇ ಮುಗಿದು ಹೋಯಿತು, ರಮ್ಯಾ ಈಗೀಗ ಬದಲಾಗುತ್ತಿದ್ದಾರೇನೋ ಅಂದುಕೊಂಡವರ ಊಹೆಯೆಲ್ಲ ಸುಳ್ಳಾಗಿ ಮತ್ತಷ್ಟು ಬೇಗನೆ ಇನ್ನೊಂದು ಹೊಸ ವಿವಾದದ ಮೂಲಕ ರಮ್ಯಾ ಮತ್ತೆ ಹೈಡ್‌ಲೈನ್‌ಗಳಿಗೆ ಆಹಾರವಾಗಿದ್ದಾರೆ!