ಹರಿಪ್ರಿಯಾಗೆ ಈಗ ನಿಧಾನವಾಗಿ ಕನ್ನಡದ ಮೇಲೆ ನಂಬಿಕೆ ಬರತೊಡಗಿದೆ. ಕಾರಣ ಆಕೆಗೆ ಸಿಗುತ್ತಿರುವ ಉತ್ತಮ ಅವಕಾಶಗಳು. ಈ ಹಿಂದೆ ಕನ್ನಡ ಚಿತ್ರರಂಗದಲ್ಲಿ ಕನ್ನಡದ ನಟಿಯರಿಗೇ ಅವಕಾಶವಿಲ್ಲ ಎಂದು ನೇರವಾಗಿ ಕೆಂಡ ಕಾರಿದ್ದ ಹರಿಪ್ರಿಯಾ ಈಗ ತಣ್ಣಗಾಗಿದ್ದಾರೆ. ಆಕೆ ಹಾಗೆ ತಣ್ಣಗಾಗೋದಕ್ಕೆ ಕಾರಣವೂ ಇದೆ. ಅದು ಯೋಗರಾಜ್ ಭಟ್!
ಹೌದು. ಯೋಗರಾಜ ಭಟ್ಟರ ಮುಂದಿನ ಚಿತ್ರಕ್ಕೆ ಹರಿಪ್ರಿಯಾ ಆಯ್ಕೆಯಾಗಿದ್ದು ಆಕೆಗೆ ರ‌್ಯಾಂಕ್ ಸಿಕ್ಕಿದಷ್ಟೇ ಖುಷಿಯಾಗಿದೆಯಂತೆ. ಆಕಾಶಕ್ಕೆ ಮೂರೇ ಗೇಣು ಎಂಬಂಥಾ ಸ್ಥಿತಿ ಈ ಹರಿಪ್ರಿಯಾದು. ನಮಗೆ ಪ್ರತಿಭೆ ಅನ್ನೋದು ಇದ್ದರೆ ಖಂಡಿತ ಉತ್ತಮ ಅವಕಾಶ ಬಂದೇ ಬರುತ್ತದೆ ಎಂಬ ಮಾತಿನಲ್ಲಿ ಹೀಗಾಗಿ ಆಕೆಗೆ ವಿಶ್ವಾಸ ಬರತೊಡಗಿದೆ.
ಯೋಗರಾಜ ಭಟ್ಟರ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದಾದ್ರೂ ಹೇಗೆ ಅಂದರೆ, ಈಕೆ ಅಷ್ಟೇ ಸರಳವಾಗಿ, ಯೋಗರಾಜ್ ಭಟ್ಟರು ಕರೆದ ಆಡಿಷನ್ ಟೆಸ್ಟಿಗೆ ಎಲ್ಲ ನಟಿಯರಂತೆ ನಾನೂ ಹೋಗಿದ್ದೆ. ನಾನು ಸೆಲೆಕ್ಟಾಗಿ ಬಿಟ್ಟೆ. ನನಗೆ ಪ್ರೋಗ್ರೆಸ್ ರಿಪೋರ್ಟ್ ನೋಡುವಷ್ಟೇ ತವಕ ಈಗಿದೆ. ರ‌್ಯಾಂಕ್ ಸಿಕ್ಕಿದರೆ ಖುಷಿಯಾಗುತ್ತಲ್ಲ, ಹಾಗಾಗಿದೆ ನನ್ನ ಪರಿಸ್ಥಿತಿ ಎನ್ನುತ್ತಾರೆ ಹರಿಪ್ರಿಯಾ.
ಅಂದಹಾಗೆ, ಹರಿಪ್ರಿಯಾ ನಟನೆಯ ಇನ್ನೊಂದು ಚಿತ್ರ ಸುಮನಾ ಕಿತ್ತೂರರ ನಿರ್ದೇಶನದ ಕಳ್ಳರ ಸಂತೆ ತೆರೆಗೆ ಬರಲು ಸಿದ್ಧವಾಗಿದೆ. ಎಲ್ಲೆಡೆ ಚಿತ್ರದ ಬ್ಯಾನರ್‌ಗಳು ರಾರಾಜಿಸತೊಡಗಿವೆ. ಚಿತ್ರದ ಬ್ಯಾನರಿನಲ್ಲಿ ನಿಮ್ಮ ಚಿತ್ರವೇ ಇಲ್ಲವಲ್ಲ, ಹೀರೋ ಚಿತ್ರ ಮಾತ್ರ ಕಾಣುತ್ತಿದೆ ಎಂದರೆ, ಚಿತ್ರರಂಗವೇ ಹಾಗೆ. ಪುರುಷ ಪ್ರಧಾನ ಉದ್ಯಮ. ಹಾಗಿರುವಾಗ ನಟಿಯರಿಗೆ ಇಂತಹ ಅವಕಾಶ ಕಡಿಮೆ. ಆದರೂ, ಈ ಚಿತ್ರದಲ್ಲಿ ಮುಂದೆ ಬರುವ ಬ್ಯಾನರ್‌ಗಳಲ್ಲಿ ನಾನಿರುತ್ತೇನೆ ಎಂದು ಸಮಜಾಯಿಸುತ್ತಾರೆ ಹರಿಪ್ರಿಯಾ.
MOKSHA
ಹರಿಪ್ರಿಯಾಗೆ ವೃತ್ತಿಪರತೆ ಇಲ್ಲ ಎಂಬ ದೂರೂ ಇದೆ. ಈ ಕುರಿತು ನೇರವಾಗಿ ಚೆಲುವೆಯೇ ನಿನ್ನ ನೋಡಲು ಚಿತ್ರದ ನಿರ್ದೇಶಕ ರಘುರಾಮ್ ಆರೋಪಿಸಿದ್ದರು. ಆದರೂ, ಈ ನಡುವೆ ಹರಿಪ್ರಿಯಾ ತನ್ನಲ್ಲಿ ಪ್ರತಿಭೆಯಿದೆ ಎಂಬುದನ್ನು ತೋರಿಸಕೊಡುವ ಮೂಲಕ ಸಾಕಷ್ಟು ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ ಎಂಬುದರಲ್ಲಿ ಸಂಶಯವೇ ಇಲ್ಲ.
ಸದ್ಯಕ್ಕೆ ಹರಿಪ್ರಿಯಾ ತನ್ನ ಮೊದಲ ತೆಲುಗು ಚಿತ್ರ ಥಕಿಟ ಥಕಿಟವನ್ನು ಪೂರ್ಣಗೊಳಿಸಿದ್ದಾರೆ. ಕಳ್ಳರ ಸಂತೆ, ಚೆಲುವೆಯೇ ನಿನ್ನ ನೋಡಲು ಚಿತ್ರದ ಶೂಟಿಂಗ್ ಕೂಡಾ ಮುಗಿದಿದೆ. ಕೈಯಲ್ಲಿರುವ ಬಹುನಿರೀಕ್ಷಿತ ಯೋಗರಾಜ ಭಟ್ಟರ ಪ್ರಾಜೆಕ್ಟಿನ ಶೂಟಿಂಗು ಇದೇ ಡಿ.6ರಿಂದ ಶುರುವಾಗಲಿದೆ. ಮುರಳಿ ನಾಯಕನಾಗಿರುವ ನಂದೇ ಎಂಬ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಒಟ್ಟಾರೆ ಹರಿಪ್ರಿಯಾ ಫುಲ್ ಬ್ಯುಸಿ.
ಕಳ್ಳರ ಸಂತೆ ಬಗ್ಗೆ ಹರಿಪ್ರಿಯಾಗೆ ಸಾಕಷ್ಟು ಭರವಸೆಯಿದೆ. ಖಂಡಿತವಾಗಿಯೂ ಯುವ ಜನರು ತನ್ನ ಪಾತ್ರ ಸ್ವೀಕರಿಸುತ್ತಾರೆಂಬ ಆತ್ಮವಿಸ್ವಾಸ ಅವರದ್ದು. ನಿರ್ದೇಶಕಿ ಸುಮನಾ ಕಿತ್ತೂರು ನನಗೆ ಸಕಷ್ಟು ಹೇಳಿಕೊಟ್ಟರು. ಅವರು ನನ್ನ ಅಕ್ಕ ಇದ್ದಂತೆ. ಚಿತ್ರದಲ್ಲಿ ನನಗೆ ಪ್ರತ್ಯೇಕವಾದ ಡಿಫರೆಂಟ್ ಮ್ಯಾನರಿಸಂ ಇದೆ. ಸುಮನಾ ಕಿತ್ತೂರು ನನ್ನನ್ನು ವಿಶೇಷವಾಗಿ ಬಳಿಸಿದ್ದಾರೆ. ಚಿತ್ರದಲ್ಲಿ ನಾನು ಕತ್ತಿ ಹಿಡಿದುಕೊಂಡು ನನ್ನ ಹೀರೋಗೆ ಕತ್ತಿ ಹಿಡಿದು ರೌಡಿಯಾಗು ಎಂದು ಗೋಗರೆಯುವ ಡಿಫರೆಂಟ್ ದೃಶ್ಯವಿದೆ. ಇದು ತುಂಬ ತಮಾಷೆಯಾಗಿ ವ್ಯಂಗ್ಯವಾಗಿಯೂ ಕಾಣುತ್ತದೆ. ಸುಮನಾ ಹೀಗೆ ನಟಿಸಬೇಕೆಂದು ನನ್ನಲ್ಲಿ ಹೇಳಿದ್ದರಿಂದ ಹಾಗೆ ನಟಿಸಿದ್ದೇನೆ. ಚಿತ್ರ ನನಗೆ ಖುಷಿ ಕೊಟ್ಟಿದೆ ಎನ್ನುತ್ತಾರೆ ಹರಿಪ್ರಿಯಾ.
ನನ್ನ ಜೀವನದಲ್ಲಿ ಅತ್ಯುತ್ತಮ ಸಂದರ್ಭ ಇದು. ಕೈತುಂಬ ಅವಕಾಶಗಳು ಹೀಗೆ ಸುರಿದದ್ದು ಇದೇ ಮೊದಲು ಎಂಬುದು ಹರಿಪ್ರಿಯಾ ನುಡಿ. ಹರಿಪ್ರಿಯಾಗೆ ಬೆಸ್ಟ್ ಆಫ್ ಲಕ್.