ಪ್ರಕಾಶ್ ರೈ ನಿರ್ದೇಶನದ 'ನಾನು ನನ್ನ ಕನಸು' ಚಿತ್ರದಿಂದ ಹೊರಬಿದ್ದಿರುವ ನಟಿ ರಮ್ಯಾ ಬಗ್ಗೆ ಚಿತ್ರದ ನಿರ್ಮಾಪಕ ಬಿ. ಸುರೇಶ್ ಮಾತ್ರ, ಆಕೆಯ ಸಹವಾಸನೇ ಬೇಡ ಅಂತ ಅಮೂಲ್ಯರನ್ನು ಆಕೆಯ ಸ್ಥಾನಕ್ಕೆ ತಂದೆ ಎನ್ನುತ್ತಾರೆ. ಈ ನಿರ್ಧಾರ ತಳೆಯಲು ಕಾರಣವಾದ್ರೂ ಏನು ಎಂದರೆ ಅವರು ಹೇಳೋದು ಹೀಗೆ, ರಮ್ಯಾ ಮೊದಲು ಒಪ್ಪಿಕೊಂಡ ಸಂಭಾವನೆಯ ಮೊತ್ತವೇ ಬೇರೆ. ಆದರೆ ಚಿತ್ರೀಕರಣ ಪ್ರಾರಂಭವಾಗುತ್ತಿದ್ದಂತೆ ಅವರು ಹೊಸ ಕ್ಯಾತೆ ತೆಗೆದು ಮೊದಲು ಕೇಳಿದ ಸಂಭಾವನೆಗಿಂತ ನಾಲ್ಕು ಪಟ್ಟು ಹೆಚ್ಚಾಗಿ ಕೇಳಿದ್ದಲ್ಲದೆ ಅಷ್ಟನ್ನು ಕೊಟ್ಟರೆ ಮಾತ್ರ ಚಿತ್ರದಲ್ಲಿ ನಟಿಸುತ್ತೇನೆ ಎಂದು ಧಮಕಿ ಹಾಕಲಾರಂಭಿಸಿದರು. ದುಡ್ಡು ಕೊಡುವುದು ಕಷ್ಟವಲ್ಲ. ಆದರೆ ಚಿತ್ರದುದ್ದಕ್ಕೂ ಅವರು ಇದೇ ರಗಳೆಯನ್ನು ಮುಂದುವರೆಸಿದರೆ ಕಷ್ಟ ಎಂಬ ಮುಂದಾಲೋಚನೆಯಿಂದ ಅವರನ್ನು ಎತ್ತಂಗಡಿ ಮಾಡಲಾಯಿತು ಎನ್ನುತ್ತಾರೆ.
ರಮ್ಯಾ ಅವರ ಬದಲಿಗೆ ಅಮೂಲ್ಯ ಅವರನ್ನು ಕರೆತಂದಾಯಿತು. ಜೊತೆಗೆ ಅಮೂಲ್ಯ ಅಷ್ಟೇ ಬೇಗನೆ ತನ್ನ ಪ್ರೇಮಿಸಂ ಮುಗಿಸಿ ನಾನು ನನ್ನ ಕನಸು ಚಿತ್ರತಂಡವನ್ನು ಸೇರಿದ್ದೂ ಆಗಿದೆ ಎಂದರು ಬಿ.ಸುರೇಶ್.
ಅಮೂಲ್ಯಗೆ ರಮ್ಯಾರ ಗುಡ್‌ಲಕ್!: ಆದರೆ ನಟಿ ರಮ್ಯಾ ಹೇಳೋದೇ ಬೇರೆ. ಚಿತ್ರೀಕರಣ ಆರಂಭದವರೆಗೂ ನನ್ನ ಸಂಭಾವನೆ ಬಗ್ಗೆ ಮಾತಾಡಲಿಲ್ಲ. ಕೊನೆಗೆ ನಾನು ನನ್ನ ನಟನೆಗೆ ಪಡೆಯುವ ಸಂಭಾವನೆಯ ಅರ್ಧಕ್ಕಿಂತಲೂ ಕಡಿಮೆ ಕೊಡಲು ಬಂದರು. ತೀರಾ ಕಡಿಮೆ ಸಂಭಾವನೆಗೆ ನಟಿಸಲು ಆಗಲ್ಲ ಎಂದೆ ಎನ್ನುತ್ತಾರೆ ರಮ್ಯ.
ತನ್ನ ಅವಕಾಶ ಅಮೂಲ್ಯ ಪಾಲಾಗಿದ್ದಕ್ಕೆ ರಮ್ಯಾ ಚಿಗುರು ಪ್ರತಿಭೆ ಅಮೂಲ್ಯಗೆ ಶುಭ ಹಾರೈಸಿದ್ದಾರೆ. ಅಮೂಲ್ಯ ಉತ್ತಮ ನಟಿ. ಆಕೆ ನಾನು ನನ್ನ ಕನಸು ಚಿತ್ರದ ಆ ಉತ್ತಮ ಅವಕಾಶವನ್ನು ಸರಿಯಾಗಿಯೇ ಬಳಸುತ್ತಾರೆಂಬ ಭರವಸೆ ನನಗಿದೆ. ಆಕೆಗೆ ಗುಡ್‌ಲಕ್ ಎಂದಿದ್ದಾರೆ.