ಎಸ್.ಎ.ಚಿನ್ನೇಗೌಡ ಹಾಗೂ ಎನ್.ಕುಮಾರ್ ನಿರ್ಮಿಸುತ್ತಿರುವ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರುವ ಶ್ರೀಹರಿ ಚಿತ್ರದ ಶೀರ್ಷಿಕೆಯನ್ನು ಇದೀಗ ಮತ್ತೆ ಶ್ರೀಹರಿಕಥೆ ಎಂದು ಬದಲಾಯಿಸಲಾಗಿದೆ. ಹಿಂದೆ ಹರಿಕಥೆ ಎಂದು ವಿಶಿಷ್ಟವಾಗಿ ನಾಮಕರಣ ಮಾಡಿದ್ದ ಚಿತ್ರಕ್ಕೆ ದಿಢೀರ್ ಆಗಿ ನಿರ್ದೇಶಕ ದಯಾಳ್ ಅದನ್ನು ಶ್ರೀಹರಿ ಎಂದು ಬದಲಾಯಿಸಿದ್ದರು. ಇದೀಗ ಮತ್ತೆ ಅದೇನನ್ನಿಸಿತೋ ಏನೋ, ಶ್ರೀಹರಿಕಥೆ ಎಂದು ಮರುನಾಮಕರಣ ಮಾಡಿದ್ದಾರೆ. ಪೂಜಾಗಾಂಧಿ ಅಭಿನಯದ ಹಾಡೊಂದನ್ನು ಚಿತ್ರೀಕರಿಸುವುದರೊಂದಿಗೆ ಕುಂಬಳಕಾಯಿ ಒಡೆಯಲಾಯಿತು.
ಕೋರಮಂಗಲದಲ್ಲಿರುವ ಓಯಸಿಸ್ ಮಾಲ್‌ನಲ್ಲಿ ಪೂಜಾಗಾಂಧಿ, ಮುರಳಿ ಹಾಗೂ 300ಕ್ಕೂ ಹೆಚ್ಚು ನೃತ್ಯ ಕಲಾವಿದರು ಅಭಿನಯಿಸಿದ ಈ ಹಾಡಿನಲ್ಲಿ ಅಡ್ಡದಾರಿ ಹಿಡಿಯುವ ಹುಡುಗರಿಗೆ ರೇಗಿಸುತ್ತಾ ಹೀಗೆಲ್ಲ ಮಾಡಬೇಡಿ ಎಂದು ಪೂಜಾ ತಿಳಿಹೇಳುತ್ತಾರೆ.
ನಿರ್ದೇಶಕ ದಯಾಳ್ ಸಹ ಈ ಹಾಡಿನಲ್ಲಿ ಅಭಿನಯಿಸಿದ್ದು ವಿಶೇಷ. ಯುವ ಜೋಡಿ ಮಾಲ್‌ಗಳಿಗೆ ಭೇಟಿಕೊಟ್ಟಾಗ ಯಾವ ರೀತಿ ದುಂದು ವೆಚ್ಚ ಮಾಡುತ್ತಾರೆ ಎಂಬುದನ್ನು ಈ ಹಾಡಿನಲ್ಲಿ ತೋರಿಸಲಾಗಿದೆಯಂತೆ. ಈಗಾಗಲೇ ಸಕಲೇಶಪುರ, ಮಂಗಳೂರು, ಸುರತ್ಕಲ್, ಮಲ್ಪೆ ಬೀಚ್‌ಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಪೂಜಾ ಗಾಂಧಿ, ತಂಗಿ ರಾಧಿಕಾ ಗಾಂಧಿ ಹಾಗೂ ಶ್ರೀಮುರಳಿ ಇದ್ದಾರೆ.