ಸತತ ಹಲವು ಸೋಲುಗಳ ನಂತರ ಮುಂಗಾರು ಮಳೆ ಖ್ಯಾತಿಯ ಮಳೆ ಹುಡುಗ ಗಣೇಶ್ ಮತ್ತೆ ಮಳೆಯಲ್ಲೇ ನೆನೆದು ಬರಲು ಪಣತೊಟ್ಟು ಅಗ್ನಿ ಪರೀಕ್ಷೆಗೆ ಸಿದ್ಧರಾಗಿದ್ದಾರೆ. ಇದೇ ಡಿಸೆಂಬರ್ 11ಕ್ಕೆ ಗಣೇಶ್ ಅಭಿನಯದ 'ಮಳೆಯಲಿ ಜೊತೆಯಲಿ' ಸಿನಿಮಾ ಬಿಡುಗಡೆಯಾಗುತ್ತಿದೆ. ಚಿತ್ರದ ಹಾಡುಗಳು ಈಗಾಗಲೇ ಹಿಟ್ ಆಗಿದ್ದು, ಮುಂಗಾರು ಮಳೆಯಲ್ಲಿ ಗಣೇಶ್‌ಗೆ ದೇವದಾಸ್ ಎಂಬ ಮೊಲದಂತೆ ಇಲ್ಲೂ ಒಂದು ಮೊಲ ಸಾಥ್ ನೀಡುತ್ತದೆಂಬ ಗುಲ್ಲು ಕೂಡಾ ಗಾಂಧಿನಗರದಲ್ಲಿ ಹಬ್ಬುವ ಮೂಲಕ ಭಾರೀ ಕುತೂಹಲ ಸೃಷ್ಠಿಸಿದೆ.
ಈ ಚಿತ್ರದಲ್ಲಿ ಲವರ್ ಬಾಯ್ ಇಮೇಜಿನಲ್ಲಿ ಕಾಣಿಸಿಕೊಂಡಿರುವ ಗಣೇಶ್ ಹೇಳುವಂತೆ, ಚಿತ್ರದಲ್ಲಿ ನಾನು ಹುಡುಗೀರ ಜೊತೆ ಫ್ಲರ್ಟ್ ಮಾಡುವಷ್ಟೇ ಭಾವುಕ ಕೂಡಾ. ಚಿತ್ರದಲ್ಲಿ ನಾನು ದನಿಗೂಡಿಸಿರುವ ಹಾರ್ಟಲ್ಲಿ ಹುಡುಗಿಯರ ಹಾವಳಿ... ಹಾಡು ಈಗಾಗಲೇ ಸಿಕ್ಕಾಪಟ್ಟೆ ಹಿಟ್ ಆಗಿದೆ. ಚಿತ್ರದ ವಿಶುವಲ್ ಕೂಡಾ ತುಂಬ ಅದ್ಭುತವಾಗಿ ಮೂಡಿಬಂದಿರುವುದು ಚಿತ್ರದ ಪ್ಲಸ್ ಪಾಯಿಂಟ್ ಎನ್ನುತ್ತಾರೆ.
ನಿರ್ದೇಶಕ ಪ್ರೀತಂ ಗುಬ್ಬಿ ಕೂಡಾ ಚಿತ್ರ ಖಂಡಿತವಾಗಿ ಪ್ರೇಕ್ಷಕರ ಮನರಂಜಿಸುವಲ್ಲಿ ಯಶಸ್ವಿಯಾಗುತ್ತದೆ ಎಂಬ ಭರ್ಜರಿ ಆತ್ಮವಿಶ್ವಾಸ ಹೊಂದಿದ್ದಾರೆ. ಗಣೇಶ್ ನಟಿಸಿದ್ದ ಮುಂಗಾರು ಮಳೆಯ ಕಥೆ ನಾನು ಬರೆದಿದ್ದೆ. ಈಗ ನಾನು ಗಣೇಶ್ ನಟನೆಯ ಸಿನಿಮಾ ನಿರ್ದೇಶನ ಮಾಡಿದ್ದೇನೆ. ಚಿತ್ರದ ಹಾಡುಗಳೆಲ್ಲವೂ ಈಗಾಗಲೇ ಹಿಟ್ ಆದ ಬಗ್ಗೆ ತುಂಬಾ ಸಂತೋಷವಿದೆ. ಹಾಗೆ ಸಿನಿಮಾ ಕೂಡಾ ಹಿಟ್ ಆಗಲಿದೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ.
MOKSHA
ಗಣೇಶ್ ಪತ್ನಿ ಶಿಲ್ಪಾ ಈ ಚಿತ್ರದ ನಿರ್ಮಾಣ ಮಾಡಿದ್ದು, ಈಗಾಗಲೇ ಭಾರೀ ಪ್ರಚಾರವನ್ನೂ ಮಾಡಿದ್ದಾರೆ. ಮಳೆಯಲಿ ಜೊತೆಯಲಿ ಚಿತ್ರಕ್ಕಾಗಿ ಗಣೇಶ್ ಜೊತೆ ಪುಟ್ಟ ಮಗು ಚಾರಿತ್ರ್ಯರನ್ನು ಕೈಯಲ್ಲಿ ಹಿಡಿದು ಹಗಲಿರುಳು ಮಳೆಯಲಿ ಗಣೇಶ್ ಜೊತೆಯಲಿ ಹೆಜ್ಜೆ ಹಾಕಿದ್ದಾರೆ. ರಿಲಯನ್ಸ್, ಕೋಕಾಕೋಲಾದಂತಹ ದೊಡ್ಡ ಸಂಸ್ಥೆಗಳ ಜೊತೆಗೆ ಪ್ರಚಾರ ಒಪ್ಪಂದವನ್ನೂ ಮಾಡಿದ್ದಾರೆ ಶಿಲ್ಪಾ.
ವಿಶೇಷ ಎಂದರೆ ಅದೇ ಚಿತ್ರದ ನಾಯಕಿ ಮುಂಬೈ ಸುಂದರಿ ಅಂಜನಾ ಸುಖಾನಿಗೆ ಡಿಸೆಂಬರ್ 10ರಂದು ಜನ್ಮದಿನ. ಹಾಗಾಗಿ ಹುಟ್ಟುಹಬ್ಬಕ್ಕೆ ತನ್ನದೇ ಚಿತ್ರ ಬಿಡುಗಡೆಯಾಗುವುದಕ್ಕಿಂತ ಹೆಚ್ಚಿನ ಉಡುಗೊರೆಯೇನಿದೆ ಎಂದು ಭಾವುಕರಾಗಿ ಹೇಳುತ್ತಾರೆ ಅಂಜನಾ ಸುಖಾನಿ.
IFM
ಥೇಟ್ 'ಮುಂಗಾರು ಮಳೆ' ಚಿತ್ರದಂತೆ ಈ ಚಿತ್ರದಲ್ಲೂ ಮುಕ್ಕಾಲು ಭಾಗ ಮಳೆಯಿದೆ. ಇದೂ ಕೂಡ ಅದರಂತೆಯೇ ಹಿಟ್ ಚಿತ್ರವಾಗಲಿದೆ ಎನ್ನುವ ನಂಬಿಕೆ ಅಂಜನಾ ಅವರದ್ದು. ಮಳೆಯಲಿ ಜೊತೆಯಲಿ ಚಿತ್ರ ಒಪ್ಪಿಕೊಂಡ ಮೇಲೆ ತುಂಬಾ ಆಫರ್‌ಗಳು ಅವರನ್ನು ಹುಡುಕಿಕೊಂಡು ಬಂದಿದ್ದವಂತೆ. ಆದರೆ ಅಂಜನಾ ಉತ್ತಮ ಬ್ಯಾನರ್‌ನಲ್ಲಿ ನಟಿಸಬೇಕೆಂಬ ಪಣ ತೊಟ್ಟಿದ್ದರಿಂದ ಯಾವುದಕ್ಕೂ ಸಹಿ ಹಾಕಲಿಲ್ಲವಂತೆ.
ಈ ಮುಂಬೈ ಹುಡುಗಿ ಅಂಜನಾ ಸುಖಾನಿಗೆ ಬೆಂಗಳೂರಿಗೆ ಬಂದು ಮಳೆಯಲಿ ಜೊತೆಯಲಿ ಚಿತ್ರಕ್ಕೆ ಸಹಿ ಮಾಡುವಾಗ ಒಂದೇ ಒಂದು ಕನ್ನಡ ಶಬ್ದ ಕೂಡಾ ಬರುತ್ತಿರಲಿಲ್ಲ. ಈಗ 'ಬನ್ನಿ, ಕೂತುಕೊಳ್ಳಿ, ನಿಮ್ಮ ಹೆಸರೇನು, ಸಾಕು, ಬೇಕು..' ಇತ್ಯಾದಿ ಪದಗಳು ಸುಲಲಿತವಾಗಿ ಈಕೆಯ ಬಾಯಿಂದ ಬರುತ್ತಿದೆ. ಇಷ್ಟು ಕನ್ನಡ ಕಲಿತಿದ್ದಕ್ಕೆ ಆಕೆಗೂ ಹೆಮ್ಮೆಯಿದೆ. ಮಳೆಯಲಿ ಜೊತೆಯಲಿ ಚಿತ್ರದ ಶೂಟಿಂಗ್ ಸಂದರ್ಭ ಬಿಡುವಿನ ವೇಳೆಯ್ಲಲಿ ಸಾಕಷ್ಟು ಕನ್ನಡ ಕಲಿತೆ. ಇಷ್ಟಾದರೂ ಕನ್ನಡ ಬರುತ್ತಿರುವುದಕ್ಕೆ ನನಗೆ ಖುಷಿಯಿದೆ. ನನ್ನ ಮುಂದಿನ ಕನ್ನಡ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ನಾನೇ ಡಬ್ ಮಾಡುವಷ್ಟು ಕನ್ನಡ ಕಲಿಯುತ್ತೇನೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾಳೆ ಅಂಜನಾ.
ಬಾಲಿವುಡ್ಡಿನಲ್ಲಿ ಮೂರ್ನಾಲ್ಕು ಚಿತ್ರಗಳಲ್ಲಿ ನಟಿಸಿದ ಅಂಜನಾ ಕೈಯಲ್ಲಿ ಇನ್ನೂ ಒಂದೆರಡು ಹಿಂದಿ ಚಿತ್ರಗಳಿವೆ. ತೆಲುಗು ಚಿತ್ರದಿಂದಲೂ ಆಫರ್ ಬಂದು ಒಪ್ಪಂದವೂ ನಡೆದಿದೆ. ಕನ್ನಡಲ್ಲಿ ಉತ್ತಮ ಅವಕಾಶಗಳು ಸಿಗುವವರೆಗೆ ಕನ್ನಡದಲ್ಲಿ ನಟಿಸುತ್ತೇನೆ. ಆರಂಭದಲ್ಲಿ ದಕ್ಷಿಣ ಭಾರತೀಯ ಚಿತ್ರಗಳಲ್ಲಿ ನಟಿಸೋದರಿಂದ ಸಾಕಷ್ಟು ಕಲಿಯಬಹುದು. ಉತ್ತಮ ತಂತ್ರಜ್ಞರ ಜೊತೆಗೆ ಕೆಲಸ ಮಾಡಿ ಪಳಗಬಹುದು. ಅಷ್ಟೇ ಅಲ್ಲ, ಇಲ್ಲಿನ ಜನರಿಗೆ ಕೆಲಸದ ಬಗ್ಗೆ ಶ್ರದ್ಧೆಯಿದೆ ಎಂದು ಹೇಳುತ್ತಾಳೆ ಅಂಜನಾ.
ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಕನ್ನಡದಲ್ಲಿ ಸಿಕ್ಕಾಪಟ್ಟೆ ಅಭಿಮಾನಿಗಳಿರೋದನ್ನು ಸ್ವತಃ ಈ ಅಂಜನಾ ಕಂಡುಕೊಂಡಿದ್ದಾರಂತೆ. ಸಕಲೇಶಪುರದಲ್ಲಿ ಶೂಟಿಂಗಿಗೆ ಹೋಗಿದ್ದಾಗ ಗಣೇಶ್ ಅವರನ್ನು ನೋಡಲು ಜನರು ಸಾಲುಗಟ್ಟಿ ನಿಂತಿದ್ದರು. ಅಷ್ಟೇ ಅಲ್ಲ, ಶೂಟಿಂಗ್ ನಡೆಯುತ್ತಿದ್ದಾಗ, ಎಲ್ಲರ ಕಣ್ಣು ಗಣೇಶ್ ಮೇಲೆ ನೆಟ್ಟಿತ್ತು. ದೂರದಿಂದಲೇ ಹಲವರು ಗಣೇಶರೆಡೆಗೆ ಇಣುಕಿ ಇಣುಕಿ ನೋಡುತ್ತಿದ್ದರು ಎನ್ನುತ್ತಾರೆ ಅಂಜನಾ. ಇಂತಿಪ್ಪ ಅಂಜನಾಗೆ ಪ್ರೇಕ್ಷಕರ ನಡುವೆ ಕುಳಿತು ಚಿತ್ರ ನೋಡುವ ಮಹದಾಸೆ ಇದೆಯಂತೆ.