ಬೆಂಗಳೂರು ಬಿಟ್ಟರೆ ಕನ್ನಡ ಚಿತ್ರರಂಗ ಮೊರೆಹೋಗುವುದು ಸಾಂಸ್ಕ್ಕತಿಕ ನಗರಿ ಮೈಸೂರನ್ನು. ನಮ್ಮ ಚಿತ್ರಗಳು ಬಹುತೇಕ ಶೂಟಿಂಗ್ ಕಾರ್ಯಗಳನ್ನು ಮೈಸೂರಿನಲ್ಲಿಯೇ ಮುಗಿಸುತ್ತವೆ. ಅದಕ್ಕೂ ಕಾರಣವಿದೆ. ಮೈಸೂರಿನಲ್ಲಿ ಟ್ರಾಫಿಕ್ ಕಡಿಮೆ, ಜೊತೆಗೆ ಮೈಸೂರು ಕಣ್ಣಿಗೆ ತಣ್ಣಗೆ ಯಾವಾಗಲೂ ಸುಂದರವಾಗಿಯೇ ಕಾಣುತ್ತದೆ. ಆದರೆ, ಮೈಸೂರಿನಲ್ಲಿ ಹಾಡುಗಳನ್ನು ಬಿಡುಗಡೆ ಮಾಡಿದರೆ ಚಿತ್ರ ಪ್ಲಾಫ್ ಆಗುತ್ತದೆ ಎಂಬ ನಂಬಿಕೆಯೂ ಗಾಂಧಿನಗರದಲ್ಲಿದೆ.
ಮೈಸೂರಿನಲ್ಲಿ ಆಡಿಯೋ ರಿಲೀಸ್ ಆದ ದೇವರ ಮಗ, ಸುಂಟರಗಾಳಿ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಸೋತಿದ್ದವಂತೆ! ಇಂತಹ ಅಂತೆ ಕಂತೆಗಳನ್ನು ಹೇಳಿ ಶಿವರಾಜ್ ಕುಮಾರ್ ಅಭಿನಯದ 'ಚೆಲುವೆಯೇ ನಿನ್ನ ನೋಡಲು' ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರನ್ನು ಬೆದರಿಸುವ ಪ್ರಯತ್ನ ನಡೆದಿದೆಯಂತೆ. ಆದರೂ ಅವರಿಬ್ಬರೂ ಇದಕ್ಕೆ ಸೊಪ್ಪು ಹಾಕಿಲ್ಲ. ಏಕೆಂದರೆ ನಿರ್ದೇಶಕರಾದ ರಘುರಾಮ್ ಮೈಸೂರಿನವರು. ಅಲ್ಲದೆ ಚಿತ್ರದ ಹಾಡುಗಳ ಬಿಡುಗಡೆ ಮೈಸೂರಿನಲ್ಲಿಯೇ ಆಗಬೇಕೆಂದು ರಚ್ಚೆ ಹಿಡಿದವರು.
ನಿರ್ಮಾಪಕರಾದ ಎಂ.ಎನ್.ಸುರೇಶ್ ಮರುಮಾತಿಲ್ಲದೆ ರಘುರಾಮ್ ಅವರ ಆಸೆಗೆ ಸಮ್ಮತಿಸಿದ್ದಾರೆ. ಯಾವುದಕ್ಕೂ ಇರಲಿ ಅಂತ ಕಾರ್ಯಕ್ರಮದ ಜಾಗವನ್ನು ಬದಲಿಸಿದ್ದಾರೆ. ಕಾರಣ ಮಗುಚಿ ಬಿದ್ದ ಚಿತ್ರಗಳ ಹಾಡಿನ ಬಿಡುಗಡೆ ಕಾರ್ಯಕ್ರಮ ಮೊದಲು ನಿಗದಿಪಡಿಸಿದ ಸ್ಥಳದಲ್ಲೇ ನಡೆದಿದ್ದವು.