ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈಗ ಸೆಂಚುರಿ ಸ್ಟಾರ್ ಆಗಿದ್ದಾರೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ. ಶಿವಣ್ಣ ಅಂದಿನಿಂದಲೇ ಹ್ಯಾಟ್ರಿಕ್ ಹೀರೋ ಅಂತಲೇ ಕರೆಸಿಕೊಳ್ಳೋದು ರೂಢಿ. ಆ ಬಿರುದು ಅವರನ್ನು ಅಲಂಕರಿಸಿ ಹಲವು ವರ್ಷಗಳೇ ಗತಿಸಿಹೋದವು. ಈಗ ಹ್ಯಾಟ್ರಿಕ್ ಹೀರೋ ಎಂದರೆ ಶಿವಣ್ಣ, ಶಿವಣ್ಣ ಎಂದರೆ ಹ್ಯಾಟ್ರಿಕ್ ಹೀರೋ ಎಂಬಷ್ಟರಮಟ್ಟಿಗೆ ಈ ಬಿರುದು ಅವರಲ್ಲಿ ಮಿಳಿತವಾಗಿದೆ. ಅದೇನೇ ಇರಲಿ, ಈಗ ಶಿವಣ್ಣರಿಗೆ ಸೆಂಚುರಿ ಸ್ಟಾರ್ ಎಂಬ ಬಿರುದೂ ದೊರೆತಿದೆ. ಈ ಬಿರುದು ಕೊಟ್ಟವರು ಇನ್ಯಾರೂ ಅಲ್ಲ, ಸ್ವತಃ ಚಾಲೆಂಜಿಂಗ್ ಸ್ಟಾರ್ ಖ್ಯಾತಿಯ ದರ್ಶನ್!
ಹೌದು. ಮೊನ್ನೆ ಮೊನ್ನೆ ಚೆಲುವೆಯೇ ನಿನ್ನ ನೋಡಲು ಚಿತ್ರದ ಕ್ಯಾಸೆಟ್ ಬಿಡುಗಡೆ ಆದಾಗಿನಿಂದ ಈ ಬಿರುದು ಅವರ ಪಾಲು. ಚೆಲುವೆಯೇ ನಿನ್ನ ನೋಡಲು ಸಿನಿಮಾದ ಅಡಿಯೋ ಕ್ಯಾಸೆಟ್ ಬಿಡುಗಡೆ ಸಂದರ್ಭ, ದರ್ಶನ್ ಶಿವಣ್ಣರಿಗೆ ಈ ಹೊಸ ಬಿರುದನ್ನು ತಾವೇ ನೀಡಿದರು. ಅಷ್ಟೇ ಅಲ್ಲ, ತಾನು ಈ ಬಿರುದು ಅವರಿಗೆ ನೀಡಿದ್ದಕ್ಕೂ ಕಾರಣವನ್ನೂ ವಿವರಿಸಿದರು.
'ಶಿವಣ್ಣ ಯಾವುದೇ ಚಿತ್ರದಲ್ಲಿ ಅಭಿನಯಿಸಿದರೂ ಅದು ಸೆಂಚುರಿ ಬಾರಿಸುತ್ತದೆ. ಹಾಗಾಗಿ ಸೆಂಚುರಿ ಸ್ಟಾರ್‌ಗಿರಿಯನ್ನು ಶಿವಣ್ಣನಿಗೆ ನಾನು ನೀಡುತ್ತಿದ್ದೇನೆ' ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರ್ಯಕ್ರಮದಲ್ಲಿ ಘೋಷಿಸಿಯೇಬಿಟ್ಟರು. ಅಂದಹಾಗೆ, ಶಿವಣ್ಣ ಅವರು ಇತ್ತೀಚೆಗಷ್ಟು 100 ಸಿನಿಮಾಗಳನ್ನು ಪೂರೈಸಿದ್ದಾರೆ.ಇತ್ತೀಚೆಗೆ ಪುಣ್ಯವಂತ ಚಿತ್ರಕ್ಕೆ ಸಹಿ ಮಾಡುವ ಮೂಲಕ 101ನೇ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಕೂಡಾ.