ಕನ್ನಡ ಚಿತ್ರಗಳಲ್ಲಿ ಇದೀಗ ಹೊಸದೊಂದು ಟ್ರೆಂಡ್ ಪ್ರಾರಂಭವಾಗಿದೆ. ಅದು ಹಳೆಯ ಸುಮಧುರ ಗೀತೆಗಳನ್ನು ರಿಮಿಕ್ಸ್ ಮಾಡುವುದು. ಹಿಂದೆ ಜನಪ್ರಿಯವಾದ ಹಾಡನ್ನು ಹಳೆಯ ಧಾಟಿಯಲ್ಲೇ ಹಾಡಿ ಮಸಾಲೆ ತುಂಬಿದ ಸಂಗೀತವನ್ನು ನೀಡಿದರೆ ಅದೇ ರಿಮಿಕ್ಸ್.
ಅಂದು ಒಂದು ಕಾಲದಲ್ಲಿ ಶಂಕರ್ ಗುರು ಚಿತ್ರದಲ್ಲಿ ಡಾ. ರಾಜ್‌ಕುಮಾರ್ ಹಾಡಿರುವ 'ಲವ್ ಮಿ ಆರ್ ಹೇಟ್ ಮಿ... ಕಿಸ್ ಮಿ ಆರ್ ಕಿಲ್ ಮಿ.. ಓ ಡಾರ್ಲಿಂಗ್ ಪ್ಲೀಸ್ ಡು ಸಂಥಿಗ್ ಟು ಮಿ...' ಎಂಬ ಕಂಗ್ಲೀಷ್ ಗೀತೆಯನ್ನು ವಿ.ಹರಿಕೃಷ್ಣ ರಿಮಿಕ್ಸ್ ಮಾಡಿದ್ದಾರೆ. ಅದನ್ನು ತಾವು ಸಂಗೀತ ನೀಡುತ್ತಿರುವ ಮೊದಲಾಸಲಾ ಚಿತ್ರಕ್ಕೆ ಬಳಸಿಕೊಂಡಿದ್ದಾರೆ. ಈ ಚಿತ್ರದ ನಿರ್ಮಾಪಕರು ಯೋಗೀಶ್ ನಾರಾಯಣ್ ಹಾಗೂ ಮಲ್ಲಿಕಾರ್ಜುನ್ ಗದಗ. ಪುರುಷೋತ್ತಮ್ ನಿರ್ದೇಶಕರು.
ಇತ್ತೀಚೆಗೆ ಕಾಸರಗೋಡು ಸೇರಿದಂತೆ ಹಲವೆಡೆ ಚಿತ್ರೀಕರಣ ಮಾಡಲಾಗಿದೆ. ರಿಮಿಕ್ಸ್ ಹಾಡಿಗೆ ನಾಯಕ ಯಶ್ ಮತ್ತು ನಾಯಕಿ ಭಾಮಾ ಹೆಜ್ಜೆ ಹಾಕಿದರು. ಅದು ಹಾಗಲ್ಲ ಹೀಗೆ.. ಎಂದು ರಾಮು ನೃತ್ಯ ಹೇಳಿಕೊಟ್ಟರೆ ಅದನ್ನು ಎಚ್.ಸಿ.ವೇಣು ಕ್ಯಾಮರಾದಲ್ಲಿ ಸೆರೆ ಹಿಡಿದರು.