ನಿರ್ಮಾಪಕ ಬಸವರೆಡ್ಡಿ ಅವರು ನಿರ್ಮಿಸುತ್ತಿರುವ ಹೊಸ ಚಿತ್ರಕ್ಕೆ ಮಿಸ್ ಇಂಡಿಯಾ ಪಟ್ಟ ಧರಿಸಿದ ನಿಕ್ಕಿದಾಸ್ ಆಯ್ಕೆಯಾಗಿದ್ದಾರೆ. ನಿಕ್ಕಿ ಮುಂಬೈ ಹುಡುಗಿಯಾದರೂ, ಮೂಲತಃ ಮಂಗಳೂರಿನವರು. ಆದರೆ ಮಾತೃಭಾಷೆ ಕೊಂಕಣಿಯಾದ್ದರಿಂದ ಕನ್ನಡ ಬರೋದಿಲ್ಲ. ಓದಿದ್ದು, ಬೆಳೆದದ್ದು ಎಲ್ಲವೂ ಮುಂಬೈನಲ್ಲೇ.
2005ರಲ್ಲಿ ಅವರು ಮಿಸ್ ಇಂಡಿಯಾ ಸೂಪರ್ ಮಾಡೆಲ್ ಆಗಿಬಿಟ್ಟರು. ಅಲ್ಲಿಂದ ಶುರುವಾಯಿತು ನಿಕ್ಕಿಯ ಫ್ಯಾಶನ್ ಯಾನ. ದೊಡ್ಡ ಸಂಸ್ಥೆಗಳ ಉತ್ಪಾದನೆಗಳ ಜಾಹೀರಾತುಗಳಲ್ಲಿ ಅವರು ಕಾಣಿಸಿಕೊಂಡರು.
ಮಂಗಳೂರಿನಲ್ಲಿ ನಿಕ್ಕಿಯ ಸಂಬಂಧಿಕರು ಇರುವುದರಿಂದ ಆಗಾಗ ಇಲ್ಲಿಗೆ ಬರುತ್ತಾರಂತೆ. ಕನ್ನಡ ಚಿತ್ರದಲ್ಲಿ ನಟಿಸಬೇಕೆಂಬ ಆಸೆ ಮೊದಲಿನಿಂದ ಇತ್ತಂತೆ. ಇದೀಗ ಉತ್ತಮ ಕಥೆ ಹಾಗೂ ತಂಡ ದೊರೆತಿರುವುದು ಅವರಿಗೆ ಖುಷಿ ತಂದಿದೆಯಂತೆ. ಕನ್ನಡ ಅಷ್ಟಾಗಿ ಅವರ ಬಾಯಲ್ಲಿ ಹೊರಳಾಡದ ಕಾರಣ ಇದೀಗ ಕನ್ನಡ ವಾಹಿನಿಗಳ ಮೊರೆ ಹೋಗಿದ್ದಾರಂತೆ. ರೋಮ್ಯಾಂಟಿಕ್, ಥ್ರಿಲ್ಲರ್, ಲವ್ ಸ್ಟೋರಿ ಚಿತ್ರಗಳೆಂದರೆ ನಿಕ್ಕಿಗೆ ಪ್ರಾಣವಂತೆ. ಅವಕಾಶ ಕೈತುಂಬಾ ಸಿಕ್ಕಿದರೆ ನಿಕ್ಕಿ ಇಲ್ಲೇ ಸೆಟ್ಲ್ ಆಗುವ ಪ್ಲಾನ್ ಮಾಡುತ್ತಿದ್ದಾರಂತೆ!