'ಚೆಲುವಿನ ಚಿತ್ತಾರ' ಖ್ಯಾತಿಯ ನಟಿ ಅಮೂಲ್ಯಾಳನ್ನು ಗುಂಡಿಕ್ಕಿ ಹತ್ಯೆ ಮಾಡುವುದಾಗಿ ಅಪರಿಚಿತ ವ್ಯಕ್ತಿಯೋರ್ವ ದೂರವಾಣಿ ಬೆದರಿಕೆ ಹಾಕಿದ್ದು, ಈ ಸಂಬಂಧ ಆಕೆಯ ಮನೆಯವರು ನಗರ ಪೋಲಿಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಅವರು ಆಗ್ರಹಿಸಿದ್ದಾರೆ.
ಅಮೂಲ್ಯಾಳ ಸೋದರ ದೀಪಕ್ ಎಂಬುವವರು ನಗರ ಪೋಲಿಸ್ ಆಯುಕ್ತ ಶಂಕರ್ ಬಿದರಿಯವರ ಬಳಿ ತೆರಳಿ, ಜಯರಾಮ್ ಎಂಬಾತ ಕಳೆದ ಕೆಲವು ದಿನಗಳಿಂದ ಸತತವಾಗಿ ತನ್ನ ಮೊಬೈಲಿಗೆ ಕರೆಮಾಡಿ ಅಮೂಲ್ಯಳನ್ನು ಗುಂಡಿಕ್ಕಿ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ದೂರು ನೀಡಿದ್ದಾರೆ.
Mokshendra
MOKSHA
ಪ್ರಕರಣವನ್ನು ಗಮನಿಸಿದ ಬಿದರಿ, ವೈಯಾಲಿ ಕಾವಲ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
ಘಟನೆ ವಿವರ.. ನಟಿ ಅಮೂಲ್ಯಾಳ ಹೆಸರನ್ನು ಕೆತ್ತಿರುವ ತೆಂಗಿನಕಾಯಿ ಚಿಪ್ಪು, ಕಲ್ಲುಗಳು ಮತ್ತು ಇಟ್ಟಿಗೆ ತುಂಡುಗಳು ನವೆಂಬರ್ 9ರಂದು ನಟಿಯ ಮನೆಯ ಪಕ್ಕವೇ ಪತ್ತೆಯಾಗಿದ್ದವು. ಇದು ಹುಚ್ಚು ಅಭಿಮಾನಿಗಳ ಕೃತ್ಯವಿರಬಹುದೆಂದು ಅಮೂಲ್ಯ ಮನೆಯವರು ಇದನ್ನು ನಿರ್ಲಕ್ಷಿಸಿದ್ದರು.
ಆದರೆ ಡಿಸೆಂಬರ್ 6ರಂದು ಅಮೂಲ್ಯಾ ಅಣ್ಣ ದೀಪಕ್ ಮೊಬೈಲ್ ಫೋನಿಗೆ ಕರೆ ಮಾಡಿದ ವ್ಯಕ್ತಿಯೋರ್ವ ತನ್ನನ್ನು ಜಯರಾಮ್ ಎಂದು ಪರಿಚಯಿಸಿಕೊಂಡು, ನವೆಂಬರ್ 9ರಂದು ನಿಮ್ಮ ಮನೆಯ ಪಕ್ಕ ಪತ್ತೆಯಾದ ವಸ್ತುಗಳಿಗೆ ನನ್ನ ಗೆಳೆಯ ಬ್ರಹ್ಮ ಕಾರಣ ಎಂದಿದ್ದ.
ಈ ಬ್ರಹ್ಮ ಎಂಬುವವನು ಸೈಕೋಪಾತ್ ಆಗಿದ್ದು, ಉತ್ತರ ಪ್ರದೇಶದವನಾಗಿದ್ದು, ಈಗ ಮಧ್ಯಪ್ರದೇಶದ ಭೋಪಾಲ್‌ನಲ್ಲಿದ್ದಾನೆ. ಈ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಕರೆತಂದು ಅಮೂಲ್ಯಾಳ ಜೀವವನ್ನೇ ಬಲಿ ತೆಗೆದುಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಲ್ಲದೆ, ಇದನ್ನೆಲ್ಲ ಮಾಡುತ್ತಿರುವುದು ಹಣಕ್ಕಾಗಿ ಎಂದು ಹೇಳಿಕೊಂಡಿದ್ದಾನೆ.
ಅಲ್ಲದೆ ದೀಪಕ್ ಅವರ ಕಾರಿನಲ್ಲಿ ತಾನು ಮೈಕ್ರೋ ಚಿಪ್ ಇಟ್ಟಿದ್ದು, ಕಾರಿನಲ್ಲಿ ಮಾತನಾಡುವುದು ನನಗೆ ತಿಳಿಯುತ್ತದೆ ಎಂದು ಕಿಡಿಗೇಡಿ ಫೋನಿನಲ್ಲಿ ಹೇಳಿಕೊಂಡಿದ್ದಾನೆ.
MOKSHA
ಜಯರಾಮ್ ಎಂದು ತನ್ನನ್ನು ಪರಿಚಯಿಸಿಕೊಂಡು ಬೆದರಿಕೆ ಹಾಕಿದ ವ್ಯಕ್ತಿ ಕರೆ ಮಾಡಿರುವುದು ತಮಿಳುನಾಡಿನಿಂದ ಎಂದು ಹೇಳಲಾಗಿದ್ದು, 9790787303 ಮತ್ತು 044-69503881 ಸಂಖ್ಯೆಗಳಿಂದ ಕರೆ ಮಾಡಿ ಹಣದ ಬೇಡಿಕೆಯನ್ನಿಟ್ಟಿದ್ದ. ತನ್ನ ಬೇಡಿಕೆಯನ್ನು ಈಡೇರಿಸದಿದ್ದರೆ ಅಮೂಲ್ಯ ಮತ್ತು ದೀಪಕ್ ಅವರುಗಳನ್ನು ಕೊಂದು ಹಾಕುವುದಾಗಿ ಹೇಳಿದ್ದಾನೆ.
ಆಟೋಗ್ರಾಫ್ ನೆಪದಲ್ಲಿ ಕಾಲೇಜಿನ ಬಳಿ ಬಂದು ಅಮೂಲ್ಯಾಳನ್ನು ಇರಿದು ಕೊಲೆ ಮಾಡುವುದಾಗಿ ಆತ ಬೆದರಿಕೆ ಹಾಕಿದ್ದು, ಆ ದಿನ ನಾಲ್ಕು ಕರೆಗಳನ್ನು ಸ್ಥಿರ ದೂರವಾಣಿಯಿಂದ ದೀಪಕ್‌ರಿಗೆ ಮಾಡಿದ್ದ.
ಅಲ್ಲದೆ ತನ್ನ ಕರೆಗಳ ಬಗ್ಗೆ ನಿರ್ಲಕ್ಷ್ಯವೇನಾದರೂ ಮಾಡಿದಲ್ಲಿ ನಿನ್ನ (ದೀಪಕ್) ಕಣ್ಣೆದುರೇ ಅಮೂಲ್ಯಾಳನ್ನು ಗುಂಡಿಕ್ಕಿ ಕೊಂದು ಹಾಕುತ್ತೇನೆ. ನಂತರ ನಿನಗೂ ಗುಂಡು ಹಾಕುತ್ತೇನೆ ಎಂದು ಹೇಳಿದ್ದಾನೆ.
ಈ ಬಗ್ಗೆ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಅಮೂಲ್ಯಾರವರಿಗೆ ಮತ್ತು ಅವರ ಕುಟುಂಬಕ್ಕೆ ಸೂಕ್ತ ಭದ್ರತೆಯನ್ನು ಒದಗಿಸಲಾಗುತ್ತದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಅಬ್ದುಲ್ ಖಾದರ್ ತಿಳಿಸಿದ್ದಾರೆ.
ಸೋದರ, ಅಮ್ಮ, ಅತ್ತಿಗೆ ಹಾಗೂ ಚಿಕ್ಕಮ್ಮನ ಮಗಳೊಂದಿಗೆ ಅಮೂಲ್ಯಾ ಮಲ್ಲೇಶ್ವರದಲ್ಲಿ ವಾಸವಾಗಿದ್ದಾರೆ. ಪ್ರಸ್ತುತ ಪ್ರಕಾಶ್ ರೈ ಅವರ 'ನಾನೂ ನನ್ನ ಕನಸು' ಚಿತ್ರದಲ್ಲಿ ಅಮೂಲ್ಯಾ ನಟಿಸುತ್ತಿದ್ದಾರೆ.
ಈ ಚಿತ್ರದಲ್ಲಿ ರಮ್ಯಾ ನಟಿಸಲು ನಿರಾಕರಿಸಿದ ನಂತರ ಅವರ ಸ್ಥಾನಕ್ಕೆ ಮುದ್ದು ನಟಿ ಅಮೂಲ್ಯಾರನ್ನು ತರಲಾಗಿತ್ತು.