ನಟಿ ಐಂದ್ರಿತಾ ರೇ ಹಾಗೂ ನಾಗತಿಹಳ್ಳಿ ಚಂದ್ರಶೇಖರ್ ಇಬ್ಬರೂ ಒಬ್ಬರನ್ನೊಬ್ಬರು ಪರಸ್ಪರ ಕ್ಷಮೆಯಾಚಿಸುವ ಮೂಲಕ 'ಐಂದ್ರಿತಾ ರೇ ಕಪಾಳಮೋಕ್ಷ' ಪ್ರಕರಣ ಸುಖಾಂತ್ಯ ಕಂಡಿದೆ. ಶೂಟಿಂಗ್‌ಗೆ ತಡವಾಗಿ ಬಂದ ಹಿನ್ನೆಲೆಯಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರರಿಂದ ಪೆಟ್ಟು ತಿಂದಿದ್ದ ಐಂದ್ರಿತಾ ರೇ ನೀಡಿದ ದೂರಿನ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಶುಕ್ರವಾರ ರಾತ್ರಿ ನಡೆದ ಸಂಧಾನ ಸಭೆಯಲ್ಲಿ ವಿವಾದಕ್ಕೆ ತೆರೆ ಎಳೆಯಲಾಯಿತು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ.ಜಯಾಮಾಲಾ ಹಾಗೂ ಹಿರಿಯ ನಟ ಅಂಬರೀಷ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಐಂದ್ರಿತಾ ರೇ ಇಬ್ಬರೂ ತಮ್ಮ ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಪರಸ್ಪರರ ಕ್ಷಮೆ ಕೋರಿದರು. ಇದಕ್ಕೂ ಮೊದಲು ಸುಮಾರು ಮೂರು ತಾಸುಗಳಿಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ನೂರು ಜನ್ಮಕೂ ಚಿತ್ರ ತಂಡದ ಸದಸ್ಯರಿಂದ ಇಡೀ ಘಟನೆಯ ಬಗ್ಗೆ ಮಾಹಿತಿ ಪಡೆದು ಜಯಮಾಲಾ ಹಾಗೂ ಅಂಬರೀಷ್ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಸಫಲರಾದರು.
MOKSHA
ಪೆಟ್ಟು ಕೊಟ್ಟಿದ್ದು ತಪ್ಪು- ಚಿತ್ರರಂಗದ ಖಂಡನೆ: ಸಂಧಾನದ ಬಳಿಕ ಮಾತನಾಡಿದ ಜಯಮಾಲಾ, ಚಿತ್ರ ತಂಡದ ಸದಸ್ಯರಿಂದ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇವೆ. ನಾಗತಿಹಳ್ಳಿ ಅವರು ಒಬ್ಬ ಕಲಾವಿದೆಗೂ ಮಿಗಿಲಾಗಿ ಒಬ್ಬ ಹೆಣ್ಣಿನ ಮೇಲೆ ಕೈ ಮಾಡಿದ್ದು ತಪ್ಪು. ಇದು ಅಕ್ಷಮ್ಯ ಅಪರಾಧವಾಗಿದ್ದು, ಈ ಘಟನೆಯನ್ನು ಇಡೀ ಚಿತ್ರೋದ್ಯಮ ತೀವ್ರವಾಗಿ ಖಂಡಿಸುತ್ತದೆ ಎಂದರು.
MOKSHA
ಐಂದ್ರಿತಾ ಹಾಗೂ ನಾಗತಿಹಳ್ಳಿ ಚಂದ್ರಶೇಖರ್ ಇಬ್ಬರಿಗೂ ಅವರವರ ತಪ್ಪಿನ ಅರಿವಾಗಿದೆ. ಇದರಿಂದ ಇಬ್ಬರೂ ಪಶ್ಚಾತಾಪ ಪಟ್ಟಿದ್ದಾರೆ. ಜೊತೆಗೆ ಒಬ್ಬರನ್ನೊಬ್ಬರು ಪರಸ್ಪರರು ಕ್ಷಮೆ ಕೋರಿದ್ದಾರೆ. ನಾಗತಿಹಳ್ಳಿ ಅವರೂ ಕೂಡಾ ತಾನು ಹೊಡೆಯಬಾರದಿತ್ತು. ಅಷ್ಟೇ ಅಲ್ಲ, ಐಂದ್ರಿತಾ ಕೂಡಾ ತುಂಬ ಭಾವನಾತ್ಮಕವಾಗಿ ಈ ವಿಷಯವನ್ನು ಮಾಧ್ಯಮದ ಮುಂದೆ ಸಾರಿ ಹೇಳಬಾರದಿತ್ತು ಎಂದಿದ್ದಾರೆ. ವಿಷಯವೀಗ ಸಂಪೂರ್ಣ ಬಗೆಹರಿದಿದೆ. ಐಂದ್ರಿತಾ ಚಿತ್ರತಂಡಕ್ಕೆ ಮತ್ತೆ ಸೇರಿಕೊಂಡಿದ್ದಾರಲ್ಲದೆ, ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸುವುದಾಗಿ ನಾಗತಿಹಳ್ಳಿ ಭರವಸೆ ನೀಡಿದ್ದಾರೆ ಎಂದು ಜಯಾಮಾಲಾ ತಿಳಿಸಿದರು.
ಸಭೆಯಲ್ಲಿ ಹಿರಿಯ ನಟ ದೊಡ್ಡಣ್ಣ, ನಿರ್ಮಾಪಕ ಸಾ.ರಾ.ಗೋವಿಂದು, ನಿರ್ದೇಶಕ ಭಗವಾನ್, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಕೆ.ಸಿ.ಎನ್.ಚಂದ್ರಶೇಖರ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಮತ್ತಿತರರು ಪಾಲ್ಗೊಂಡಿದ್ದರು.