'ಅಮೃತಧಾರೆ'ಯಲ್ಲಿ ಮಿಂದ ಚೆಂದದ ನಟ ಧ್ಯಾನ್ (ಸಮೀರ್ ದತ್ತಾನಿ) ಅವರಿಗೆ ಇತ್ತೀಚೆಗೆ ಕನ್ನಡದಲ್ಲಿ ಯಾಕೋ ಅವಕಾಶಗಳು ಸಿಗುತ್ತಿಲ್ಲ. ಆದರೆ ಬಾಲಿವುಡ್ಡಿನಲ್ಲಿ ಮಾತ್ರ ಧ್ಯಾನ್‌ಗೆ ಇತ್ತೀಚೆಗೆ ಬಂಪರ್ ಅವಕಾಶಗಳು ಲಭಿಸುತ್ತಿದೆ. ಹೀಗಾಗಿ ಧ್ಯಾನ್ ಬರೋಬ್ಬರಿ ಖುಷಿಯಾಗಿದ್ದಾರೆ.
ಧ್ಯಾನ್ ಮುಂಬೈ ಹುಡುಗನಾದರೂ, ಹಿಂದಿಯಲ್ಲಿ ದಕ್ಕಿದ ಅವಕಾಶಗಳಿಗಿಂತಲೂ ಬೆಂಗಳೂರಲ್ಲಿ ಬಾಚಿಕೊಂಡದ್ದೇ ಹೆಚ್ಚು. ಕನ್ನಡದ ನಟ ಎಂದು ಗುರುತಿಸಿಕೊಳ್ಳುವಷ್ಟರ ಮಟ್ಟಿಗೆ ಧ್ಯಾನ್ ಚಿತ್ರಗಳು ಕ್ಲಿಕ್ಕಾಗಿವೆ. 'ಕಾರ್ ಕಾರ್ ಕಾರ್ ಕಾರ್ ಎಲ್ನೋಡಿ ಕಾರ್..' ಎಂದು ಕಾರಿನಲ್ಲಿ ಹಾಡುತ್ತಾ ಬಂದ ಈ ನಮ್ಮ ಪ್ರೀತಿಯ ಹುಡುಗ ಈಗ ಹಿಂದಿಯಲ್ಲಿ ಕರಣ್ ಜೋಹರ್ ನಿರ್ಮಾಣದ ಬಹುದೊಡ್ಡ ಬ್ಯಾನರಿನಡಿಯ ಚಿತ್ರಕ್ಕೆ ನಾಯಕನಾಗಿ ನಟಿಸಲು ಸಹಿ ಹಾಕಿದ್ದಾನೆ. ಹಾಗಾಗಿ ಬಾಲಿವುಡ್ಡಿನಲ್ಲೂ ಕ್ಲಿಕ್ಕಾಗುವ ದಿನಗಳು ದೂರವಿಲ್ಲ ಎಂದು ಧ್ಯಾನ್ ಕನಸು ಕಾಣುತ್ತಿದ್ದಾರೆ.
ಅದೇನೇ ಇರಲಿ, ಧ್ಯಾನ್ ಕನ್ನಡದಲ್ಲಿ ತನಗೆ ಸಿಕ್ಕ ಅವಕಾಶಗಳನ್ನು ಮಾತ್ರ ಮರೆತಿಲ್ಲ. ಕನ್ನಡದಲ್ಲಿ ಉತ್ತಮ ಚಿತ್ರಗಳಲ್ಲಿ ನಟಿಸಲು ಧ್ಯಾ್ ಹೃದಯ ಸದಾ ತೆರೆದಿದೆಯಂತೆ. ಅದಕ್ಕೇ ಅವರು ಇತ್ತೀಚೆಗೆ ನೆರೆ ಪರಿಹಾರಕ್ಕೂ ತಮ್ಮ ಉದಾರ ಧನಸಹಾಯ ಮಾಡಿದ್ದಾರೆ.
ಅಂದ ಹಾಗೆ, ಕೆಲವು ವರ್ಷಗಳ ಹಿಂದೆ ಶರಣ್ ನಿರ್ದೇಶನದ ವಿಶ್ವನಾಥ್ ನಿರ್ಮಾಣದ ಧ್ಯಾನ್ ಮತ್ತು ಜೆನ್ನಿಫರ್ ಜೋಡಿಯ 'ಓ ಮನಸೇ' ಎಂಬ ಚಿತ್ರ ಮುಹೂರ್ತ ಆಗಿದ್ದಷ್ಟೆ. ಮತ್ತೆ ಆ ಚಿತ್ರ ಎತ್ತ ಹೋಯಿತೆಂಬುದೇ ತಿಳಿಯಲಿಲ್ಲ. ಆದರೆ ಇಲ್ಲಿ ಸಲ್ಲದಿದ್ದರೂ ಅಲ್ಲಿ ಸಲ್ಲುವತ್ತ, ಸಲ್ಲಿಸುವತ್ತ ಗಮನ ಹರಿಸಿದ್ದಾನೆ ಈ ಚಾಕೋಲೇಟ್ ಹುಡುಗ. ಧ್ಯಾನ್‌ಗೆ ಶುಭಾಶಯ ಹೇಳೋಣ.