ಅತ್ತ ತುಳು ಸಮ್ಮೇಳನಕ್ಕೆ ತೆರೆ ಬಿಳುತ್ತಿದ್ದಂತೆ ಇತ್ತ ಸುಗ್ರೀವ ಚಿತ್ರವನ್ನು ಕೇವಲ 18 ಗಂಟೆಗಳಲ್ಲಿ ಚಿತ್ರೀಕರಿಸಿದ ದಾಖಲೆ ನಿರ್ಮಾಪಕ ಅಣಜಿ ನಾಗರಾಜ್, ತುಳು ಚಿತ್ರವೊಂದನ್ನು ಮಾಡುವುದಾಗಿ ಘೋಷಿಸಿದ್ದಾರೆ. ಆ ಚಿತ್ರದ ಹೆಸರು 'ಒರಿಯರ್ದೊರಿ ಅಸಲ್'. ಅಂದರೆ 'ಒಬ್ಬರಿಗಿಂತ ಒಬ್ಬರು ಕಡೆ'. ಇದು ತುಳು ರಂಗಭೂಮಿಯಲ್ಲಿ ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡ ಭಾರೀ ಹೆಸರು ಪಡೆದ ಹಾಸ್ಯ ನಾಟಕವಾಗಿತ್ತು. ಇದರ ಎಳೆಯಿಂದಲೇ ಚಿತ್ರಕಥೆ ಹೆಣೆಯಲಾಗಿದೆಯಂತೆ.
ಇದು ಕಡಿಮೆ ಬಜೆಟ್ಟಿನ ಚಿತ್ರ ಅಲ್ಲ ಸ್ವಾಮಿ. ಇದನ್ನೂ ಥೇಟ್ ಕನ್ನಡ ಚಿತ್ರದಂತೆ ಅಂದರೆ ದುಡ್ಡು ಸುರಿದು ಡಿಟಿಎಸ್, ಡಿಐ ಮುಂತಾದ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಚಿತ್ರ ಮಾಡಲಾಗುತ್ತದೆಯಂತೆ!
ಜನವರಿ 14ರಿಂದ ಚಿತ್ರೀಕರಣ ಶುರು. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯವನ್ನು ಜನಪ್ರಿಯ ತುಳು ನಾಟಕಾಕಾರ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ನೀಡಲಿದ್ದಾರೆ. ರಾಜಶೇಖರ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಹಾಗೂ ಎ.ಕೆ ವಿಜಯ್ ಸಂಗೀತ ನೀಡಲಿದ್ದಾರೆ. ಮತ್ತೊಂದು ವಿಶೇಷವೆನೆಂದರೆ, ಈ ಚಿತ್ರದಲ್ಲಿ ಖ್ಯಾತ ತುಳು ನಾಟಕಕಾರರು ನಟಿಸುತ್ತಿದ್ದಾರಂತೆ!