ತಮಿಳಿನಲ್ಲಿ ಶಿಲ್ಪಾ ಶೆಟ್ಟಿ, ಕನ್ನಡಕ್ಕೆ ದೀಪಿಕಾ, ಕಾಜೊಲ್, ಪ್ರೀತಿ ಝಿಂಟಾ?!!
MOKSHA
ತಮಿಳಿನ ಹಿಟ್ ಚಿತ್ರ ಖುಷಿ ಕನ್ನಡದಲ್ಲಿ ರಿಮೇಕ್ ಆಗುತ್ತಿದ್ದು, ಅದರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪ್ರಿಯಾಮಣಿ ಅಭಿನಯಿಸುತ್ತಿರುವುದು ಈಗಾಗಲೇ ಜಗಜ್ಜಾಹೀರಾದ ವಿಷಯ. ಇದೇ ತಿಂಗಳ 23ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಚಿತ್ರದ ನಿರ್ಮಾಪಕರು ಎಂ.ಚಂದ್ರಶೇಖರ್ ಮತ್ತು ನಿರ್ದೇಶಕರು ಮುಸ್ಸಂಜೆ ಮಹೇಶ್.
ವಿಶೇಷವೇನೆಂದರೆ, ಈ ಚಿತ್ರದ ಮೊದಲ ಹಾಡಿಗಾಗಿ ಚಿತ್ರ ತಂಡ ಈಗ ಬಾಲಿವುಡ್ ನಟಿಯರಲ್ಲಿ ಯಾರಾದರೊಬ್ಬರನ್ನು ಕರೆಸುವ ಬಗ್ಗೆ ಯೋಚಿಸುತ್ತಿದೆ. ಮೂಲ ಚಿತ್ರ ಖುಷಿಯಲ್ಲಿ ಶಿಲ್ಪಾ ಶೆಟ್ಟಿ ಹೆಜ್ಜೆ ಹಾಕಿದ್ದ ಹಾಡಿನ ಜಾಗದಲ್ಲಿ ಈಗ ಕನ್ನಡದಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.
ನಿರ್ದೇಶಕ ಮುಸ್ಸಂಜೆ ಮಹೇಶ್ ಹೇಳುವ ಪ್ರಕಾರ, ದೀಪಿಕಾ ಪಡುಕೋಣೆ, ಕಾಜೋಲ್, ಪ್ರೀತಿ ಜಿಂಟಾ, ನಯನತಾರ ಮೊದಲಾದವರ ಬಳಿ ತೆರಳಿ ಈ ಕುರಿತು ಮಾತುಕತೆ ನಡೆಸಲಾಗಿದಯಂತೆ. ಯಾರೂ ಈ ಬಗ್ಗೆ ಖಚಿತವಾಗಿ ಒಕೆ ಅಂದಿಲ್ಲ. ಹಾಗಾಗಿ ಈ ನಾಲ್ವರಲ್ಲಿ ಯಾರಾದರೊಬ್ಬರು ಆಯ್ಕೆಯಾಗಬಹುದು ಅಥವಾ ಆಗದಿರಲೂಬಹುದು. ಅಥವಾ ನಾಲ್ವರನ್ನು ಬಿಟ್ಟು ಬೇರೆಯವರು ಯಾರಾದರೂ ಬಂದರೂ ಬರಬಹುದು ಎಂದು ರೀಲು ಸುತ್ತುತ್ತಾರೆ ಮಹೇಶ್. ಯಾವುದಕ್ಕೂ ಕಾದು ನೋಡಬೇಕಷ್ಟೆ.