ನಗರದ ಲೀ ಮೆರಿಡಿಯನ್ ಎಂಬ ಝಗಮಗಿಸುವ ಹೊಟೇಲಿನಲ್ಲಿ 'ಜಸ್ಟ್ ಮಾತ್ ಮಾತಲಿ' ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಈ ಸಮಾರಂಭಕ್ಕೆ ಬಾಲಿವುಡ್ ನಟ ವಿವೇಕ್ ಒಬೆರಾಯ್, ತೆಲುಗಿನ ಜಗಪತಿ ಬಾಬು ಮತ್ತು ತಮಿಳಿನ ಸಿಂಬು ಹೀಗೆ ಅಕ್ಕ ಪಕ್ಕದ ಚಿತ್ರರಂಗದ ಗಣ್ಯರೆಲ್ಲ ಆಗಮಿಸಿದ್ದರು. ನಿರ್ದೇಶಕ, ನಟನಾಗಿ ಈ ಚಿತ್ರದಲ್ಲಿ ಅಭಿನಯಿಸುತ್ತಿರುವ ಸುದೀಪ್ ಬಂದಿದ್ದರೆಂದು ವಿವರಿಸಿ ಹೇಳಬೇಕಾಗಿಲ್ಲ. ಒಟ್ಟಾರೆ ಎಲ್ಲ ಗಣ್ಯರಿಂದ ತುಂಬಿ ತುಳುಕುತ್ತಿದ್ದ ಸಮಾರಂಭದಲ್ಲಿ ಒಬ್ಬಳೇ ಒಬ್ಬ ಸ್ಟಾರ್ ನಾಪತ್ತೆಯಾಗಿದ್ದರು. ಅದ್ಯಾರು ಅಂತ ವಿವರಿಸಿ ಹೇಳಬೇಕಾಗಿಲ್ಲ ಅಲ್ಲವೇ.
ಹೌದು. ನಿಮ್ಮ ಊಹೆ ನಿಜ. ಈ ಚಿತ್ರದ ನಾಯಕಿ, ಕಾಂಟ್ರಾವರ್ಸಿ ಕ್ವೀನ್ ರಮ್ಯಾ ಈ ಸಮಾರಂಭದಲ್ಲಿ ಗೈರುಹಾಜರಾಗಿದ್ದರು. ಜಸ್ಟ್ ಮಾತ್ ಮಾತಲಿ ಚಿತ್ರದ ಸೆಟ್ಟಿನಲ್ಲಿ ಚಿತ್ರದ ಕೊರಿಯೋಗ್ರಾಫರ್ ಹರ್ಷ ಜೊತೆಗೆ ಜಗಳವಾಡಿ ಹೋದ ರಮ್ಯರನ್ನು ಚಿತ್ರತಂಡ ಆಮೇಲೆ ತನ್ನ ಜೊತೆ ಸೇರಿಸಿಕೊಂಡಿರಲಿಲ್ಲ. ಬಹುತೇಕ ಶೇ.80ರಷ್ಟು ಚಿತ್ರ ಪೂರ್ಣಗೊಂಡಿದ್ದರಿಂದ ಹಾಗೂ ಚಿತ್ರದಲ್ಲಿ ರಮ್ಯಾ ನಟನೆಯ ಭಾಗ ಬಹುತೇಕ ಮುಗಿದುದರಿಂದ ರಮ್ಯಾ ಬದಲಿಗೆ ಬೇರೆ ನಟಿಯ ಆಯ್ಕೆಯ ಅಗತ್ಯ ಚಿತ್ರತಂಡಕ್ಕಿರಲಿಲ್ಲ. ಚಲನಚಿತ್ರ ಮಾಣಿಜ್ಯ ಮಂಡಳಿಯ ಸಂಧಾನ ಸಭೆಯಲ್ಲಿ ರಮ್ಯಾ ಕ್ಷಮೆ ಕೇಳುವ ಮೂಲಕ ಪ್ರಕರಣ ಕೊನೆಗೊಂಡಿತ್ತು. ಈಗ ಚಿತ್ರದ ಆಡಿಯೋ ಕ್ಯಾಸೆಟ್ ಬಿಡುಗಡೆಗೊಂಡಿದೆ.
ಹಾಗಾಗಿ ಜಸ್ಟ್ ಮಾತ್ ಮಾತಲಿ ಚಿತ್ರದ ನಾಯಕಿಯಾಗಿ ರಮ್ಯಾ ಈ ಚಿತ್ರಕ್ಕೆ ಸಾಕಷ್ಟು ಪ್ರಚಾರ ನೀಡಿದ್ದಂತೂ ಸುಳ್ಳಲ್ಲ. ದೂರದೂರುಗಳಿಂದೆಲ್ಲ ಗಣ್ಯರ ತಂಡ ಇಲ್ಲಿ ಹಾಜರಿದ್ದರೂ ರಮ್ಯಾರ ಗೈರು ಹಾಜರಿ ಯಾಕೆಂದು ಯಾರಿಗೂ ಅರ್ಥವಾಗದಿರಲಿಲ್ಲ. ಇಷ್ಟೆಲ್ಲಾ ಆದರೂ, ರಮ್ಯಾ ಯಾಕೆ ಈ ಕಾರ್ಯಕ್ರದಿಂದ ತಪ್ಪಿಸಿಕೊಂಡರು ಎಂಬುದು ಚಿತ್ರದ ನಿರ್ಮಾಪಕ ಶಂಕರೇಗೌಡರಿಗೂ ಗೊತ್ತೇ ಇಲ್ವಂತೆ!!!
ಜಸ್ಟ್ ಮಾತ್ ಮಾತಲಿ ವಿವಾದ ತಣ್ಣಗಾದ ಮೇಲೆ ಸುದೀಪ್ ಸ್ವತಃ ರಮ್ಯಾ ಮೊಬೈಲಿಗೆ ಸಂದೇಶ ರವಾನಿಸಿದ್ದರಿಂದ ಸುದೀಪ್- ರಮ್ಯಾ ಪರಸ್ಪರ ರಾಜಿಯಾಗಿದ್ದಾರೆಂಬ ಮಾತೂ ಗಾಂಧಿನಗರದಲ್ಲಿ ಚಾಲ್ತಿಯಲ್ಲಿದೆ. ಆದರೂ ಈ ಸಮಾರಂಭಕ್ಕೆ ನಿಜಕ್ಕೂ ರಮ್ಯಾಗೆ ಆಮಂತ್ರಣವಿತ್ತೋ, ರಮ್ಯಾರನ್ನು ಚಿತ್ರತಂಡ ಇನ್ನೂ ಹೊರಗಿಡುತ್ತಿದೆಯೋ, ಅಥವಾ, ಸ್ವತಃ ರಮ್ಯಾರೇ ಸಮಾರಂಭಕ್ಕೆ ಚಕ್ಕರ್ ಹಾಕಿದ್ರೋ... ಎಲ್ಲವೂ ನಿಗೂಢವೇ ಸರಿ.