ಇತ್ತೀಚಿನ ದಿನಗಳಲ್ಲಿ ನಟ ರಮೇಶ್ ಅವರಿಗೆ ಪುರುಸೊತ್ತು ಇಲ್ಲದ ಹಾಗಾಗಿದೆ. ಸ್ವಲ್ಪ ಸಮಯದಲ್ಲಿ ಕಡಿಮೆ ಬಜೆಟ್ಟಿನಲ್ಲಿ ಚಿತ್ರ ಮುಗಿಸಿಕೊಡುವ ನಟ ರಮೇಶ್, ಸಿಕ್ಕಾಪಟ್ಟೆ ಚಿತ್ರಗಳಿಗೆ ಸಹಿ ಹಾಕುತ್ತಿದ್ದಾರೆ. ಅಂತಹ ಸಹಿ ಹಾಕಿದ ಚಿತ್ರಗಳಲ್ಲಿ ಹೆಂಡ್ತೀರ ದರ್ಬಾರ್ ಕೂಡ ಒಂದು. ಈ ಚಿತ್ರದ ಅಡಿ ಬರಹ ಗಂಡಂದಿರೇ ಹುಷಾರ್!
ಇದು ವರವು ಎತ್ತಣ ಸಲವು ಪತ್ತಣ ಎಂಬ ತಮಿಳು ಚಿತ್ರದ ರಿಮೇಕ್. ಅಲ್ಲಿ ವಿ. ಶೇಖರ್ ನಿರ್ದೇಶಿಸಿದ್ದರು. ಕನ್ನಡದಲ್ಲಿಯೂ ಅವರೇ ನಿರ್ದೇಶನ ಮಾಡಲು ಹೊರಟಿದ್ದಾರೆ. ಈ ಚಿತ್ರದ ನಿರ್ಮಾಪಕರು ಜಿ. ರಾಮಚಂದ್ರನ್.
ಈಗಾಗಲೇ ಕಳೆದ ಹದಿನೈದು ದಿನಗಳಿಂದಲೂ ಚಿತ್ರೀಕರಣ ಸಾಗಿದೆ. ರಮೇಶ್ ಅವರಿಗೆ ಜೋಡಿಯಾಗಿ ಚತುರ್ಭಾಷಾ ತಾರೆ ಮೀನಾ ನಟಿಸುತ್ತಿದ್ದಾರೆ. ಮದುವೆಯ ನಂತರ ಮೀನಾ ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇದೊಂದು ಪಕ್ಕಾ ಮನರಂಜನೆ ಚಿತ್ರವಂತೆ. ಅದರಲ್ಲೂ ಸಾಮಾನ್ಯ ಕುಟುಂಬದಲ್ಲಿ ನಡೆಯುವ ನಿತ್ಯದ ಜಂಜಾಟಗಳೊಂದಿಗೆ ಹಾಸ್ಯಮಯ ಸನ್ನಿವೇಶಗಳನ್ನು ಇಟ್ಟುಕೊಂಡು ಕಥೆಯನ್ನು ಹೆಣೆಯಲಾಗಿದೆಯಂತೆ. ರಂಗಾಯಣ ರಘು ಮತ್ತು ಸಾಧು ಕೋಕಿಲ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದಮೇಲೆ ಹಾಸ್ಯಕ್ಕೇನೂ ಕಡಿಮೆ ಇರುವುದಿಲ್ಲ. ಅಂದ ಹಾಗೆ ಈ ಚಿತ್ರಕ್ಕೆ ಸಾಧು ಅವರದೇ ಸಂಗೀತವಿದೆ.