ಸಂಗೀತ ನಿರ್ದೇಶನದ ಮೂಲಕ ಖ್ಯಾತರಾಗಿದ್ದ ಎಂ.ಎನ್ ಕೃಪಾಕರ್ ಇದೀಗ ಬಣ್ಣ ಹಚ್ಚುತ್ತಿದ್ದಾರೆ. ಅದೂ ನಾಯಕ ನಟನಾಗಿ! ಎಲ್ಲವೂ ಅಂದುಕೊಂಡಂತೆ ಆದರೆ ಬರುವ ಫೆಬ್ರವರಿ ಹೊತ್ತಿಗೆ ಕೃಪಾಕರ್, ನಟನಾಗಿ ನಿರ್ದೇಶಕನ ಆದೇಶಗಳನ್ನು ಪಾಲಿಸಲಿದ್ದಾರೆ.
ಅಂದಹಾಗೆ, ಈ ಚಿತ್ರವನ್ನು ನಿರ್ದೇಶಿಸುತ್ತಿರುವವರು ನಟ ಹಾಗೂ ನಿರ್ಮಾಪಕ ಅಭಿಜಿತ್. ನಿಜ ಹೇಳಬೇಕೆಂದರೆ ಕೃಪಾಕರ್ ಈ ಚಿತ್ರಕ್ಕೆ ಸಂಗೀತ ನೀಡಲು ಹೊರಟವರು. ಚಿತ್ರಕ್ಕೆ ಮತ್ತೊಬ್ಬರು ನಾಯಕನಾಗಬೇಕಿತ್ತು. ಕೊನೆಘಳಿಗೆಯಲ್ಲಿ ಆ ಅದೃಷ್ಟ ಕೃಪಾಕರ್ ಅವರ ಕಡೆಗೆ ತಿರುಗಿದೆ ಎಂಬುದು ಸುದ್ದಿ.
ಈ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ಈಗಾಗಲೇ ಕಥೆ, ಚಿತ್ರಕಥೆ, ಸಂಭಾಷಣೆ ತಯಾರಾಗಿದೆಯಂತೆ. ಮೂವರು ನಾಯಕಿಯರು ಬೇಕಂತೆ. ಅದರಲ್ಲಿ ಇಬ್ಬರಿಗೆ ಮುಂಬೈನಿಂದ ಆಗಮಿಸಲು ಟಿಕೆಟ್ ಮಾಡಿಯಾಗಿದೆ ಎಂಬ ಸುದ್ದಿಯಿದೆ.
ಇದು ಲವ್ ಇರುವ ಆಕ್ಷನ್ ಸಿನಿಮಾ. ಹಾಗಾಗಿ ಇದರಲ್ಲಿ ಎರಡು ಫೈಟ್, ಒಂದು ಐಟಂ ಸಾಂಗ್, ಒಂದೆರಡು ಮಚ್ಚು, ಸ್ವಲ್ಪ ಅಳು ಜೊತೆಗೊಂದಿಷ್ಟು ನಗು ಮುಂತಾದವುಗಳನ್ನು ಈ ಚಿತ್ರದಲ್ಲಿ ನಿರೀಕ್ಷಿಸಬಹುದಂತೆ.