ರಾಷ್ಟ್ರಕವಿ ಕುವೆಂಪು ಅವರನ್ನು ಚಲನಚಿತ್ರ ಮಾಧ್ಯಮದ ಮೂಲಕ ತೆರೆಗೆ ತರುವ ಗಂಭೀರ ಪ್ರಯತ್ನ ಕನ್ನಡದಲ್ಲೀಗ ನಡೆಯುತ್ತಿದೆ. ಖ್ಯಾತ ರಂಗಭೂಮಿ ಕಲಾವಿದ, ನಾಟಕಕಾರ ಸಿ.ಆರ್.ಸಿಂಹ ಅವರ ಪುತ್ರ ರಂಗಭೂಮಿ ಕಲಾವಿದರಾದ ಋತ್ವಿಕ್ ಸಿಂಹ ಅವರು 'ರಸಋಷಿ ಕುವೆಂಪು' ಎಂಬ ಸಿನಿಮಾವನ್ನು ನಿರ್ದೇಶಿಸುವ ಅಭೂತಪೂರ್ವ ಪ್ರಯತ್ನ ಮಾಡಲು ಹೊರಟಿದ್ದಾರೆ. ಕುವೆಂಪು ಪಾತ್ರದಲ್ಲಿ ಸ್ವತಃ ತಂದೆ ಸಿ.ಆರ್.ಸಿಂಹ ನಟಿಸುತ್ತಿರುವುದು ವಿಶೇಷ.
ಈ ಸಿನಿಮಾ ಕುವೆಂಪು ಅವರ ಜೀವನದ ಪ್ರಮುಖ ಘಟನೆಗಳನ್ನು ಆಧರಿಸಿದೆ. ಅತ್ತ ಕಮರ್ಷಿಯಲ್ ಕೂಡಾ ಅಲ್ಲದೆ, ಇತ್ತ ಸಂಪೂರ್ಣವಾಗಿ ಕಲಾತ್ಮಕವೂ ಅಲ್ಲದ ಸಾಮಾನ್ಯ ಜನರಿಗೂ ತಲುಪಬಲ್ಲ ಮಾದರಿಯಲ್ಲಿ ಚಿತ್ರವನ್ನು ಕಟ್ಟಿಕೊಡುವುದು ಋತ್ವಿಕ್ ಸಿಂಹ ಅವರ ಉದ್ದೇಶ. ಚಿತ್ರವನ್ನು ನೈಜ ಮಾದರಿಯಲ್ಲಿ ತೆರೆಗೆ ತರಲಾಗುತ್ತಿದ್ದು, ಕುವೆಂಪು ಅವರ ಕುಪ್ಪಳ್ಳಿಯ ನಿವಾಸದಲ್ಲೇ ಚಿತ್ರೀಕರಣ ನಡೆಯಲಿದೆ.
ರಂಗಭೂಮಿ ಕಲಾವಿದರಾದರೂ, ಈ ಚಿತ್ರ ಋತ್ವಿಕ್ ಅವರ ಮೊದಲ ನಿರ್ದೇಶನ. ಚಿತ್ರವನ್ನು ಸಾಕಷ್ಟು ನೈಜವಾಗಿ ತೆರೆಗೆ ತರುವ ಉದ್ದೇಶದಿಂದ ಕುವೆಂಪು ಅವರೇ ಬಳಸುತ್ತಿದ್ದ ಹಲವು ವಸ್ತುಗಳನ್ನು ಚಿತ್ರದಲ್ಲಿ ಬಳಸಲಾಗುತ್ತಿದೆಯಂತೆ. ಕುವೆಂಪು ಅವರ ಪೆನ್ನು, ಅವರು ಹಾಕಿಕೊಳ್ಳುತ್ತಿದ್ದ ಜುಬ್ಬಾ, ಅವರು ಕೂರುತ್ತಿದ್ದ ಕುರ್ಚಿ, ಬಳಸುತ್ತಿದ್ದ ಮೇಜು, ಓಡಾಡುತ್ತಿದ್ದ ಕಾರು ಎಲ್ಲವೂ ಚಿತ್ರದಲ್ಲಿ ನೈಜವಾಗಿ ಬಳಸಲಾಗುತ್ತಿದೆ. ಆದರೆ ಕುವೆಂಪು ಪಾತ್ರವನ್ನು ಮಾತ್ರ ಆವಾಹಿಸಿಕೊಂಡು ಸಿ.ಆರ್.ಸಿಂಹ ನಟಿಸಲಿದ್ದಾರೆ. ಕುವೆಂಪು ಅವರ ಪತ್ನಿಯಾಗಿ ನಟಿ ಪದ್ಮಜಾ, ಕುವೆಂಪು ಅವರ ಪತ್ನಿಯ ಸೀರೆಯುಟ್ಟು ನಟಿಸಿದ್ದಾರೆ. ಚಿತ್ರಕ್ಕೆ ಸಂಗೀತ ವಿ.ಮನೋಹರ್ ನೀಡಿದ್ದು, ಅರವಿಂದ್ ಪ್ರಕಾಶ್ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.