ಐಂದ್ರಿತಾ ಬಳಿ ನಾನು ಕ್ಷಮೆ ಕೇಳಿಯೇ ಇಲ್ಲ: ನಾಗತಿಹಳ್ಳಿ ಚಂದ್ರಶೇಖರ್!
MOKSHA
'ನೂರು ಜನ್ಮಕೂ' ಚಿತ್ರದಲ್ಲಿ ಐಂದ್ರಿತಾಗೆ ನಾಗತಿಹಳ್ಳಿ ಕಪಾಳಮೋಕ್ಷ ಮಾಡಿದ ಪ್ರಕರಣ ಯಾಕೋ ಮತ್ತೆ ಗರಿಗೆದರಿದೆ. ಐಂದ್ರಿತಾ ಹಾಗೂ ನಾಗತಿಹಳ್ಳಿ ಚಂದ್ರಶೇಖರ್ ಇಬ್ಬರೂ ಈ ಬಗ್ಗೆ ಸಾರ್ವಜನಿಕವಾಗಿ ಇನ್ನು ಮುಂದೆ ಹೇಳಿಕೆ ನೀಡುವಂತಿಲ್ಲ ಎಂದರೂ, ನಾಗತಿಹಳ್ಳಿ ಚಂದ್ರಶೇಖರ್ ಅವರು ಪತ್ರಿಕಾಗೋಷ್ಠಿ ಕರೆದು ಧಾರಾಳವಾಗಿ ಮನಬಿಚ್ಚಿದ್ದಾರೆ. ಜೊತೆಗೆ ತಾನು ಹೊಡೆದುದಕ್ಕೆ ಐಂದ್ರಿತಾ ಬಳಿ ಕ್ಷಮೆ ಕೇಳಿಲ್ಲ ಎಂದೂ 'ಸತ್ಯ' ಹೇಳಿದ್ದಾರೆ.
ಕೆಲದಿನಗಳ ಹಿಂದಷ್ಟೇ ಹಾಂಗ್‌ಕಾಂಗ್‌ನಿಂದ ಮರಳಿದಾಗ ಸುದ್ದಿಸ್ಫೋಟಗೊಂಡಿದ್ದ ಐಂದ್ರಿತಾ ಕಪಾಳಮೋಕ್ಷ ಪ್ರಕರಣ ಅಂತೂ ಎರಡು ದಿನಗಳಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ಬಗೆಹರಿಸಲಾಗಿತ್ತು. ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲಾ ಪತ್ರಕರ್ತರನ್ನು ಆಹ್ವಾನಿಸಿ, 'ಸಮಸ್ಯೆ ಬಗೆಹರಿಸಲಾಗಿದೆ. ಇಬ್ಬರಿಗೂ ಪಶ್ಚಾತಾಪವಾಗಿದ್ದು ಪರಸ್ಪರ ಕ್ಷಮೆ ಕೇಳಿಕೊಂಡಿದ್ದಾರೆ' ಎನ್ನುವಲ್ಲಿಗೆ ಮಾಧ್ಯಮಗಳು ಆ ಸುದ್ದಿ ಬಿಟ್ಟು ತಮ್ಮ ಎಂದಿನ ಸುದ್ದಿಬೇಟೆಯಲ್ಲಿ ತೊಡಗಿದ್ದವು.
ಕ್ಷಮೆಯನ್ನೇ ಕೇಳಿಲ್ಲ!: ಆದರೆ ಈಗ ಮತ್ತೆ ಬಂದ ಸುದ್ದಿಗಳ ಪ್ರಕಾರ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ, 'ನಾನು ಐಂದ್ರಿತಾ ಬಳಿ ಕ್ಷಮೆ ಕೇಳಿದ್ದೇನೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದ್ದು ಸುಳ್ಳು. ನಾನು ಆಕೆಯಲ್ಲಿ ಕ್ಷಮೆ ಕೇಳಿಲ್ಲ. ಆದರೆ ರಾಜಿ ಪಂಚಾಯ್ತಿ ಸಂದರ್ಭ ಜಯಮಾಲಾ ನಾನು ಐಂದ್ರಿತಾಗೆ ಹೊಡೆದುದು ತಪ್ಪು ಎಂದಿದ್ದು ಮಾತ್ರ ನಿಜ' ಎಂದಿದ್ದಾರೆ!
ಡಾ.ಜಯಮಾಲಾ ಹಾಗೂ ಅಂಬರೀಷ್ ನೇತೃತ್ವದಲ್ಲಿ ಡಿ.11ರಂದು ನಡೆದ ಸಂಧಾನ ಸಭೆಯಲ್ಲಿ ಸ್ಪಷ್ಟವಾಗಿ ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಐಂದ್ರಿತಾ ರೇ ಸೇರಿದಂತೆ, ಇಡೀ ಚಿತ್ರತಂಡಕ್ಕೆ ಮುಂದೆ ಎಲ್ಲಿಯೂ ಕಪಾಳಮೋಕ್ಷ ಕುರಿತ ವಿಚಾರವಾಗಿ ಸಾರ್ವಜನಿಕವಾಗಿ ಹೇಳಿಕೆಗಳ್ನು ನೀಡಬಾರದು ಎಂದು ಸೂಚಿಸಲಾಗಿತ್ತು. ಅದರಂತೆ, ಐಂದ್ರಿತಾ ರೇ ಆಮೇಲೆ ಎಲ್ಲಿಯೂ ಆ ಬಗ್ಗೆ ಮಾತಾಡಿರಲಿಲ್ಲ. ನಾನು ಒಪ್ಪಿಕೊಂಡ ಕಾರ್ಯವಾದ ಚಿತ್ರದಲ್ಲಿ ನನ್ನ ಭಾಗವನ್ನು ಮುಗಿಸಿಕೊಡುತ್ತೇನೆ. ಈಗ ಆಗಿದ್ದನ್ನು ಮರೆಯುತ್ತೇನೆ ಎಂದು ಐಂದ್ರಿತಾ ಹೇಳಿಕೊಂಡಿದ್ದರು. ಆದರೆ ನಾಗತಿಹಳ್ಳಿ ಚಂದ್ರಶೇಖರ್ ಮಾತ್ರ ತಾನು ನೀಡಿದ ವಾಗ್ದಾನವನ್ನು ಮರೆತು ಮತ್ತೆ ಪತ್ರಿಕಾಗೋಷ್ಠಿ ಕರೆದು ಹಳೆಯ ಕಪಾಳಮೋಕ್ಷ ಸಂಗತಿಯನ್ನು ಅಲ್ಪ ಸ್ವಲ್ಪ ಮತ್ತೆ ತೇಪೆ ಹಚ್ಚುವ ಪ್ರಯತ್ನ ಮಾಡಿದ್ದಾರೆ ಎಂದರೆ ತಪ್ಪಲ್ಲ.
MOKSHA
ಕಪಾಳಮೋಕ್ಷ ಪ್ರಕರಣ ಸಂದರ್ಭ, ಐಂದ್ರಿತಾ ರೇ ಮಾಧ್ಯಮಗಳ ಎದುರು ಅಳುತ್ತಾ ನನಗೆ ನಾಗತಿಹಳ್ಳಿ ಹೊಡೆದ್ರು ಎನ್ನುತ್ತಿರುವಾಗ ಪತ್ರಿಕೆ, ಟಿವಿ ಮಾಧ್ಯಮಗಳ ಪತ್ರಕರ್ತರೆಲ್ಲ ನಾಗತಿ ಮೊಬೈಲಿಗೆ ಫೋನು ಮಾಡಲಾರಂಭಿಸಿದ್ದರು. ಆದರೆ ನಾಗತಿ ಯಾರೊಬ್ಬರ ಮೊಬೈಲ್ ಕರೆಗಳನ್ನೂ ಸ್ವೀಕರಿಸಲೇ ಇಲ್ಲ. ಅವರು ತರಾತುರಿಯಲ್ಲಿ ಸುವರ್ಣ ಟಿವಿ ಹಾಗೂ ಟಿವಿ9 ಬಿಟ್ಟರೆ ಯಾವ ಮಾಧ್ಯಮಗಳಿಗೂ ಹೇಳಿಕೆ ನೀಡಿರಲಿಲ್ಲ. ಈ ಕಾರಣಕ್ಕಾಗಿ ನೂರು ಜನ್ಮಕೂ ಚಿತ್ರದ ಪತ್ರಿಕಾಗೋಷ್ಠಿ ಎಂಬ ಹೆಸರಿನಲ್ಲಿ ಬೆಂಗಳೂರಿನ ಹೊಟೇಲೊಂದರಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ನಾಗತಿಹಳ್ಳಿ ನೂರು ಜನ್ಮಕೂ ಚಿತ್ರಕ್ಕಿಂತ ಹೆಚ್ಚಾಗಿ ತನ್ನ ಹಪಹಪಿತನ ಬಣ್ಣಿಸಿದರು.
ಅಮ್ಮನ ಮೊಬೈಲ್ ಕರೆಯನ್ನೂ ಸ್ವೀಕರಿಸಿಲ್ಲ!: ಎಲ್ಲ ಮಾಧ್ಯಮ ಪ್ರತಿನಿಧಿಗಳನ್ನೂ ಕರೆದು ಅವರಿಗೆಲ್ಲ ತಾನು ಬರೆದುಕೊಂಡು ಬಂದಿದ್ದ ಪತ್ರವನ್ನು ಹಂಚಿ ಅದನ್ನು ಓದಿ ಹೇಳಿದರು. ಅದರಲ್ಲಿ ಅವರ ಹೇಳಿಕೆಯ ಸಾರಾಂಶ ಹೀಗಿತ್ತು. ನಾನು ಹಾಂಗ್‌ಕಾಂಗ್‌ಗೆ ನೂರು ಜನ್ಮಕೂ ಚಿತ್ರೀಕರಣಕ್ಕೆ ಹೋಗಬೇಕೆಂದುಕೊಳ್ಳುವ ಮೊದಲೇ ಪತ್ರಕರ್ತರನ್ನೆಲ್ಲ ಕರೆದು ಚಿತ್ರದ ಬಗ್ಗೆ ಮಾತನಾಡಬೇಕೆಂದಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಬಂದ ಮೇಲೆ ಪ್ರಯಾಣದಿಂದಾಗಿ ತುಂಬಾ ಸುಸ್ತಾಗಿತ್ತು. ಅದೇ ಸಂದರ್ಭ ಐಂದ್ರಿತಾ ವಾಣಿಜ್ಯ ಮಂಡಳಿಗೆ ತಾನು ಹೊಡೆದಿರುವ ಬಗ್ಗೆ ದೂರು ನೀಡಿದ್ದರು. ಸುದ್ದಿ ಎಲ್ಲ ಟಿವಿ ಮಾಧ್ಯಮಗಳಲ್ಲೂ ಬರಲು ಶುರುವಾದಾಗ, ದಿಢೀರನೆ ಸ್ಫೋಟಗೊಂಡ ಸುದ್ದಿಯಿಂದ ತಾನು ದಿಗ್ಮೂಢನಾಗಿಬಿಟ್ಟೆ. ಈ ಕಾರಣದಿಂದ ಯಾವ ಕರೆಗೂ ಉತ್ತರ ಕೊಡಲಿಲ್ಲ. ಮನೆಯ ಮುಂದೆ ಪತ್ರಕರ್ತರು ಬಂದಿದ್ದರು. ನನಗೆ ಹೊರಗೆ ಹೋಗಿ ಅವರ ಜೊತೆಗೆ ಮಾತನಾಡುವ ಚೈತನ್ಯ ಇರಲಿಲ್ಲ. ಅಷ್ಟು ಅಧೀರನಾಗಿಬಿಟ್ಟೆ. ಈ ಪ್ರಕರಣ ನಡೆದ ಮೇಲೆ ನಾನು ನನ್ನ ಅಮ್ಮನ ಫೋನ್ ಕರೆಯ್ನೂ ಸ್ವೀಕರಿಸಿಲ್ಲ. ಇದರರ್ಥ ನಾನು ಪಲಾಯನವಾದಿಯಾಗಲು ಹೊರಟಿದ್ದೆ ಎಂಬುದಲ್ಲ. ಆದರೆ ಇಡೀ ಪ್ರಕರಣದಿಂದ ನಾನು ಸಾಕಷ್ಟು ಡಿಪ್ರೆಶನ್‌ಗೆ ಒಳಗಾಗಿದ್ದೆ ಎಂದು ಅವರು ತಮ್ಮ ಸುದೀರ್ಘ ಪತ್ರವನ್ನು ಓದಿದರು.
ಹೊಡೆದರೆ ಅಪಾರ್ಥ ಮಾಡಬೇಡಿ: ಗುರು-ಶಿಷ್ಯ ಸಂಬಂಧದಲ್ಲಿ ಕಪಾಳಕ್ಕೆ ಹೊಡೆದರೆ ಬೇರೆ ಅರ್ಥವಿರುತ್ತದೆ. ಆದರೆ, ಹೊಡೆಸಿಕೊಂಡವರಿಗೆ ಆ ಭಾವನೆ ಇರದಿದ್ದರೆ ಅದು ಬೇರೆ ಅರ್ಥ ಹೊರಡಿಸುತ್ತದೆ. ಮುಂಗೋಪ ನನ್ನ ದೌರ್ಬಲ್ಯ. ನಾನು ಖಚಿತತೆ ಬಯಸುತ್ತೇನೆ. ಹೀಗಾಗಿ ಮುಂಗೋಪಿಯಾಗುತ್ತೇನೆ. ಹೊಡೆದ ಮಾತ್ರಕ್ಕೆ ಕ್ಷಮೆ ಕೇಳುವ ತಪ್ಪನ್ನು ನಾನು ಮಾಡಿದ್ದೇನೆಂದಲ್ಲ. ಇಂಥ ಘಟನೆಗಳ ಬಗ್ಗೆ ವಿಷಾದವಿದೆ. ಭಾವನಾತ್ಮಕ ಸಂಬಂಧ ಚಿತ್ರರಂಗದಲ್ಲಿ ಕಾಣೆಯಾಗುತ್ತಿರುವುದಕ್ಕೆ ಈ ಪ್ರಕರಣ ಉದಾಹರಣೆ ಎಂದು ನಾಗತಿಹಳ್ಳಿ ವಿವರಿಸಿದರು.
ಪತ್ರಿಕಾಗೋಷ್ಠಿಗೆ ಬರುವಂತೆ ಚಿತ್ರತಂಡದ ಎಲ್ಲರಿಗೂ ಆಹ್ವಾನ ಕೊಟ್ಟಿದ್ದಾಗಿ ನಾಗತಿಹಳ್ಳಿ ತಿಳಿಸಿದರೂ, ಪತ್ರಿಕಾಗೋಷ್ಠಿಯಲ್ಲಿ ಅವರೊಂದಿಗೆ ನಾಯಕ ಸಂತೋಷ್ ಒಬ್ಬರೇ ಇದ್ದರು. ಇದೇ ವೇಳೆ ಸಂತೋಷ್ ಅವರೂ ಕೂಡಾ ನಾಗತಿಹಳ್ಳಿ ಅವರ ಎದುರಲ್ಲೇ, ಐಂದ್ರಿತಾಗಲ್ಲದೆ, ತನಗೂ ನಾಗತಿಹಳ್ಳಿ ಹೊಡೆದಿದ್ದರು. ಕಪಾಳಕ್ಕೆ ಹೊಡೆದದ್ದನ್ನು ಬಿಟ್ಟರೆ ನಾಗತಿಹಳ್ಳಿ ಯಾವ ತಪ್ಪನ್ನೂ ಮಾಡಿಲ್ಲ, ಎಷ್ಟಾದರೂ ಮೇಷ್ಟ್ರಲ್ಲವಾ ಎಂದು ಸಂತೋಷ್ ನಗುತ್ತಾ ಮಾತು ಹಾರಿಸಿದರು.
ಆದರೆ, ತಮಗೆ ನಿರ್ದೇಶಕರೂ ಸೇರಿದಂತೆ ಯಾರೂ ಆಹ್ವಾನ ನೀಡಿಲ್ಲ. ನೂರು ಜನ್ಮಕೂ ಚಿತ್ರದ ಶೂಟಿಂಗ್ ಮುಗಿವ ಮೊದಲೇ ಪತ್ರಿಕಾಗೋಷ್ಠಿ ಕರೆದಿರುವುದು ನನಗೆ ಆಶ್ಚರ್ಯ ತಂದಿದೆ ಎಂದು ಐಂದ್ರಿತಾ ರೇ ಪ್ರತಿಕ್ರಿಯಿಸಿದ್ದಾರೆ.