ಶಿವರಾಜ್ ಕುಮಾರ್ ಅವರ ಜೋಗಿ ಚಿತ್ರ ತೆರೆಕಂಡ ನಂತರ ಭೂಗತ ಜಗತ್ತಿನ ಚಿತ್ರಗಳು ಕನ್ನಡದಲ್ಲಿ ಬೇಕಾಬಿಟ್ಟಿ ಬರುತ್ತಿವೆ. ಜೋಗಿಯಲ್ಲಿ ರೌಡಿಸಂ ಇದ್ದರೂ ಅದರಲ್ಲಿ ತಾಯಿ-ಮಗನ ವಾತ್ಸಲ್ಯವೇ ಕೇಂದ್ರವಾಗಿತ್ತು ಎಂಬುದನ್ನು ಎಷ್ಟೋ ಮಂದಿ ಮರೆತಿರುವುದು ವಿಷಾದನೀಯ ಸಂಗತಿ. ಅದು ಹಾಗಿರಲಿ.
ಮೊನ್ನೆ ಅಂಡರ್ ವರ್ಲ್ಡ್ ಹಿನ್ನೆಲೆಯ ಇಂಥದ್ದೇ ಮತ್ತೊಂದು ಚಿತ್ರ ಸೆಟ್ಟೇರಿದೆ. ಅದು ಶ್ರೀಮತಿ ರಮ ಅವರು ಕಥೆ, ಚಿತ್ರಕಥೆ ಬರೆದು ನಿರ್ಮಿಸುತ್ತಿರುವ ಸಲಗ. ಈ ಚಿತ್ರದ ಮುಹೂರ್ತ ಸಮಾರಂಭದ ಸಂದರ್ಭದಲ್ಲಿ ಕುಣಿಗಲ್ ನಾಗಭೂಷಣ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು.
ಮಾನಸಿಕ ಅಸ್ವಸ್ಥನಾದ ನಾಯಕನ ಜೀವನದಲ್ಲಿ ಪ್ರೀತಿ ಎನ್ನುವುದು ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಯುವ ನಿರ್ದೇಶಕ ಪ್ರಾಣ್ ಈ ಚಿತ್ರದ ಮೂಲಕ ನಿರೂಪಿಸಲಿದ್ದಾರಂತೆ. ಶಂಕರ್ ಅವರ ಛಾಯಾಗ್ರಹಣ, ಸಿ.ವಿ.ಬ್ರದರ್ಸ್ ಸಂಭಾಷಣೆ, ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ. ಸಾಹಸ ಪ್ರಧಾನವಾದ ಈ ಚಿತ್ರಕ್ಕೆ ಕೌರವ ವೆಂಕಟೇಶ್ ಮತ್ತು ಅಲ್ಟಿಮೇಟ್ ಶಿವು ಜಂಟಿಯಾಗಿ ಸಾಹಸ ನಿರ್ದೇಶನ ಮಾಡಿದ್ದಾರೆ. ಕಿರಣ್, ಆಶಾ ತ್ರಿಪಾಠಿ, ದಯಾನಂದ್, ಬ್ಯಾಂಕ್ ಜನಾರ್ಧನ್, ಶೋಭರಾಜ್ ಹಾಗೂ ಕುಣಿಗಲ್ ನಾಗಭೂಷಣ್ ಪ್ರಮುಖ ತಾರಾಗಣದಲ್ಲಿದ್ದರೆ.