ಪೇಪರ್ ದೋಣಿ ಮಾಡಿ ಮಳೆಗಾಲದಲ್ಲಿ ಮನೆಯಂಗಳದಲ್ಲಿ ಹರಿದು ಹೋಗುವ ನೀರಿನಲ್ಲಿ ದೋಣಿ ಬಿಟ್ಟು ಆಟ ಆಡಿದ್ದು ಹಲವರ ಬಾಲ್ಯದ ನೆನಪುಗಳಲ್ಲಿ ಒಂದು. ಮಕ್ಕಳಾಗಿದ್ದಾಗ ಹಾಗೆ ಆಟವಾಡಿ ಸಪ್ತಸಾಗರಗಳನ್ನೇ ದಾಟಿದಂಥ ಖುಷಿಯಿದ್ದರೆ, ಇದೇ ಪೇಪರ್ ದೋಣಿ ಈಗ ಸಾಂಕೇತಿಕವಾಗಿ ಅಂಥದ್ದೇ ಕಥಾ ಎಳೆಯನ್ನು ಹೊತ್ತು ಸದ್ದಿಲ್ಲದೆ ಚಿತ್ರವಾಗುತ್ತಿದೆ.
ಹೌದು. ಪೇಪರ್ ದೋಣಿ ಹೆಸರಿನ ಚಿತ್ರವೊಂದು ಇದೀಗ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ಆರ್.ಕೆ. ನಾಯಕ್ ಈ ಚಿತ್ರದ ನಿರ್ದೇಶಕರು. ಇದು ಇವರ ಮೊದಲ ಚಿತ್ರ. ಜಿ. ಜನಾರ್ದನ್ ಪೇಪರ್ ದೋಣಿಯ ನಿರ್ಮಾಪಕರು.
ಈ ಚಿತ್ರ ಆರಂಭವಾಗುವುದೇ ಕ್ಲೈಮ್ಯಾಕ್ಸಿನಿಂದ ಎಂದು ಅಚ್ಚರಿ ಹುಟ್ಟಿಸುತ್ತಾರೆ ನಾಯಕ್. ಈಗಿನ ಸತ್ಯ ಪ್ರಪಂಚಕ್ಕೆ ನಾನು ಹೇಳೋದು ಸುಳ್ಳು ಕಥೆ. ಈ ಸುಳ್ಳು ಕತೆಯನ್ನು ಈಗಿನ ಸತ್ಯ ಪ್ರಪಂಚ ಒಪ್ಪಿಕೊಂಡರೆ ನೀವಿರೋ ಸತ್ಯ ಪ್ರಪಂಚಾನೇ ಸುಳ್ಳು. ನಾನು ಹೇಳೋದೆ ಸತ್ಯ..! ಎನ್ನುವ ನಾಯಕ್, ಇದು ಅರ್ಥವಾಗಬೇಕಾದರೆ ಚಿತ್ರ ನೋಡಿ ಎನ್ನುತ್ತಾರೆ ನಾಯಕ್.
ಅವರ ಪ್ರಕಾರ, ನಾಯಕ ನಟ ನವೀನ್ ಕೃಷ್ಣ ಅವರಿಗೆ ಈ ಚಿತ್ರ ಹೊಸ ಇಮೇಜ್ ಕೊಡುವುದು ಖಂಡಿತವಂತೆ. ಹಾಗೆಯೇ ನಟ ಅವಿನಾಶ್ ಅವರ ಚಿತ್ರಜೀವನದಲ್ಲೇ ಈ ಚಿತ್ರ ವಿಭಿನ್ನ ಪಾತ್ರ ನೀಡಿದೆ ಎಂದು ಆರ್.ಕೆ ನಾಯಕ್ ಹೇಳಿಕೊಂಡಿದ್ದಾರೆ.