ಗಾನಗಾರುಡಿಗ ಸಿ.ಅಶ್ವಥ್ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು
MOKSHA
'ರೇರೇರೇರೇರಾ...' ಎಂದು ತನ್ನ ಅದ್ಭುತ ಕಂಠದಿಂದಲೇ ಮಿಂಚಿನ ಸಂಚಾರ ಮಾಡುವ 'ಕನ್ನಡವೇ ಸತ್ಯ' ಖ್ಯಾತಿಯ ಕನ್ನಡ ಸುಗಮ ಸಂಗೀತದ ದಿಗ್ಗಜ ಸಿ ಅಶ್ವಥ್ ಅವರು ತೀವ್ರವಾಗಿ ಅಸ್ವಸ್ಥಗೊಂಡು ಬೆಂಗಳೂರು ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. 70ರ ಹರೆಯದ ಈ ಸಂಗೀತ ಮಾಂತ್ರಿಕ ಅಶ್ವಥ್ ಅವರು ಕೆಲದಿನಗಳಿಂದ ಪಿತ್ತಜನಕಾಂಗ ಹಾಗೂ ಮೂತ್ರಜನಕಾಂಗದ ಸಮಸ್ಯೆಯಿಂದ ತೀವ್ರವಾಗಿ ಬಳಲುತ್ತಿದ್ದರು.
ಗುರುವಾರ ಮಧ್ಯಾಹ್ನದ ವೇಳೆಗೆ ಇದ್ದಕ್ಕಿಂದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮಧ್ಯರಾತ್ರಿವರೆಗೂ ಅಶ್ವಥ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರಲಿಲ್ಲ.
ಪಿತ್ತಕೋಶದ ತೊಂದರೆಯಿಂದಾಗಿ ವಾರದ ಹಿಂದೆಯಷ್ಟೆ ಇದೇ ಆಸ್ಪತ್ರೆಯಲ್ಲಿ ಅಶ್ವಥ್ ಚಿಕಿತ್ಸೆ ಪಡೆದಿದ್ದರು. ತೀವ್ರ ನಿಗಾ ಘಟಕದಲ್ಲಿರುವ ಅವರನ್ನು ನಾಲ್ಕು ಮಂದಿ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಇತ್ತೀಚೆಗಷ್ಟೆ ಆಸ್ಟ್ರೇಲಿಯಾದಲ್ಲಿ ಹಾಡಿ ಮರಳಿದ್ದರು. ಇದೇ ಡಿಸೆಂಬರ್ 29ರಂದು ತಮ್ಮ 70ನೇ ಹುಟ್ಟುಹಬ್ಬದ ದಿನದಂದು ಅಶ್ವಥ್ ಹಾಡಲು ತೀರ್ಮಾನಿಸಿದ್ದರು. ಹಾಗೂ ಅವರಿಗೆ ಸನ್ಮಾನ ಸಮಾರಂಭವನ್ನೂ ಅಭಿಮಾನಿಗಳು ಹಮ್ಮಿಕೊಂಡಿದ್ದರು. ಅಶ್ವಥ್ ಅವರು ಬೇಗ ಗುಣಮುಖರಾಗಲೆಂದು ಹಾರೈಸೋಣ.