ಮಠ ಹಾಗೂ ಎದ್ದೇಳು ಮಂಜುನಾಥ ಚಿತ್ರಗಳ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಅವರ ಮುಂದಿನ ಚಿತ್ರ 'ಡೈರೆಕ್ಟರ್ಸ್ ಸ್ಪೆಷಲ್' ನಿಂದ ನಟ ಕೋಮಲ್ ಹೊರಬಂದಿದ್ದಾರೆ. ಕಳೆದ ವಾರವಷ್ಟೆ ಗುರುಪ್ರಸಾದ್ ಜೊತೆಗೆ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದ ಕೋಮಲ್ ದಿಢೀರ್ ಶನಿವಾರ ಖಾಸಗಿ ಪತ್ರಿಕಾಗೋಷ್ಠಿ ಕರೆದು ತಾನು ಗುರುಪ್ರಸಾದ್ ನಿರ್ದೇಶನದ ಚಿತ್ರದಿಂದ ಹೊರಬಂದಿದ್ದೇನೆಂದು ಪ್ರಕಟಿಸಿದರು.
ನಾನು ಕಾಮಿಡಿ ಪಾತ್ರಗಳಲ್ಲಿ ನಟಿಸುವುದರಲ್ಲಷ್ಟೇ ಹೆಚ್ಚು ಆಸಕ್ತಿ ಹೊಂದಿದ್ದೇನೆ. ಆದರೆ ವ್ಯಂಗ್ಯ ಮಾಡುವುದಕ್ಕೆ ನನ್ನಿಂದ ಸಾಧ್ಯವಿಲ್ಲ. ಹಾಗಾಗಿ ಡೈರೆಕ್ಟರ್ಸ್ ಸ್ಪೆಷಲ್ ಚಿತ್ರದ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸುವಷ್ಟು ಶಕ್ತ ನಾನಲ್ಲ. ಆದ್ದರಿಂದ ಚಿತ್ರದ ನಿರ್ಮಾಪಕರಿಗೆ ಈ ಬಗ್ಗೆ ತಿಳಿಸಿ ಚಿತ್ರದಿಂದ ಹೊರಬಂದಿದ್ದೇನೆ. ಇದು ನನ್ನೊಬ್ಬನ ನಿರ್ಧಾರ. ಇದರ ಹಿಂದೆ ಯಾರೊಬ್ಬರ ಒತ್ತಡವೂ ಇಲ್ಲ ಎಂದು ಕೋಮಲ್ ಸ್ಪಷ್ಟಪಡಿಸಿದ್ದಾರೆ.
ನನಗೆ ಕಳ್ಳರ ಸಂತೆ ಚಿತ್ರದಿಂದಲೂ ಆಫರ್ ಬಂದಿತ್ತು. ಆದರೆ ರಾಜಕೀಯದ ವ್ಯಂಗ್ಯ ಆ ಚಿತ್ರದಲ್ಲಿದುದರಿಂದ ನಾನು ನಟಿಸಲು ಒಪ್ಪಲಿಲ್ಲ. ಡೈರೆಕ್ಟರ್ಸ್ ಸ್ಪೆಷಲ್ ಚಿತ್ರದ ಮೂಲಕ ಕನ್ನಡ ಚಲನಚಿತ್ರ ನಿರ್ದೇಶಕರು ಹಾಗೂ ಕನ್ನಡ ಸಿನಿಮಾರಂಗವನ್ನೇ ಅಪಹಾಸ್ಯ ಮಾಡುವಷ್ಟು ದೊಡ್ಡವ ನಾನಾಗಿಲ್ಲ. ಅಪಹಾಸ್ಯ ಮಾಡಿ ಅರಗಿಸುವ ತಾಕತ್ತೂ ನನಗಿಲ್ಲ. ಕನ್ನಡ ಚಿತ್ರರಂಗ ಕುಟುಂಬದ ಸದಸ್ಯನಾಗಿ ಅದೇ ಕುಟುಂಬವನ್ನು ಅಪಹಾಸ್ಯ ಮಾಡಲಾರೆ. ಇದು ನಿರ್ದೇಶಕರ ಕಾನ್ಸೆಪ್ಟ್ ಆಗಿದ್ದರೂ, ನಾಳೆ ಎಲ್ಲರೂ ಬೊಟ್ಟು ಮಾಡಿ ತೋರಿಸುವುದು ಅಭಿನಯಿಸಿದ ನನ್ನನ್ನು. ನನಗೆ ಗುರುಪ್ರಸಾದ್ ಅವರ ಮೇಲೆ ನಂಬಿಕೆಯಿದೆ. ಅವರ ಚಿತ್ರದಿಂದ ಹೊರಬಂದುದು ನನಗೆ ನಷ್ಟವಾದರೂ, ನಾನು ಹೊರಗುಳಿಯಲೇಬೇಕಾಗುತ್ತದೆ ಎಂದು ಕೋಮಲ್ ಕಾರಣ ವಿವರಿಸಿದ್ದಾರೆ.
ಗುರುಪ್ರಸಾದ್ ಅವರ ಎರಡು ಚಿತ್ರಗಳಲ್ಲಿ ನನಗೆ ನಟಿಸಲು ಅವಕಾಶ ನೀಡಿದ್ದರು. ಒಂದು ಲವ್ ಸ್ಟೋರಿ. ಇನ್ನೊಂದು ಇದು. ನಾನು ಲವ್ ಸ್ಟೋರಿ ಮೊದಲು ನಿರ್ದೇಶಿಸುತ್ತಾರೆಂದು ಅಂದುಕೊಂಡೆ. ಆದರೆ ಮೊನ್ನೆ ಪತ್ರಿಕಾಗೋಷ್ಠಿಯಲ್ಲಿ ಅವರು ಲವ್ ಸ್ಟೋರಿಯ ಬಗ್ಗೆ ಮಾತೆತ್ತಲಿಲ್ಲ. ಡೈರೆಕ್ಟರ್ಸ್ ಸ್ಪೆಷಲ್ ಬಗ್ಗೆ ಮಾತ್ರ ಹೇಳಿದರು. ಡೈರೆಕ್ಟರ್ಸ್ ಸ್ಪೆಷಲ್ ಚಿತ್ರದ ಕಥೆಯನ್ನು ಸಂಪೂರ್ಣ ಆಲಿಸಿದ ಮೇಲೆ ಪಾತ್ರದ ಆಳ ಅರ್ಥೈಸಿಕೊಂಡು ಚಿತ್ರದಿಂದ ಹೊರಗುಳಿವ ನಿರ್ಧಾರ ಮಾಡಿದೆ. ನಾನು ಈ ಚಿತ್ರಕ್ಕಾಗಿ ಪಡೆದಿದ್ದ ಮುಂಗಡ ಹಣವನ್ನು ನಿರ್ಮಾಪಕರಿಗೆ ಹಿಂತಿರುಗಿಸಿದ್ದೇನೆ ಎಂದು ಕೋಮಲ್ ತಿಳಿಸಿದರು.
ಆದರೆ ಗುರುಪ್ರಸಾದ್ ಮಾತ್ರ ತಾವು ಕೋಮಲ್ ಅವರ ಮನವೊಲಿಸಿ ಮತ್ತೆ ತನ್ನ ಚಿತ್ರಕ್ಕೆ ಕರೆತರುವ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ಈ ಹಿಂದೆ ಗುರುಪ್ರಸಾದ್, ಮಠ ಹಾಗೂ ಎದ್ದೇಳು ಮಂಜುನಾಥ ಚಿತ್ರ ನೀಡಿ ಜನರಿಂದ ಶಹಬ್ಬಾಸ್ ಗಿರಿ ಪಡೆದಿದ್ದರು. ಆದರೆ ಎದ್ದೇಳು ಮಂಜುನಾಥ ಚಿತ್ರದ ನಂತರ ಜಗ್ಗೇಶ್ ಜೊತೆಗಿನ ರಂಪಾಟದಿಂದಾಗಿ ಜಗ್ಗೇಶ್ ಅವರನ್ನು ಬಿಟ್ಟು ಮುಂದೆ ತನ್ನ ಚಿತ್ರಕ್ಕೆ ಜಗ್ಗೇಶ್ ತಮ್ಮ ಕೋಮಲ್ ಅವರನ್ನು ಆಯ್ಕೆ ಮಾಡಿದ್ದರು. ಇದು ಜಗ್ಗೇಶ್ ಅವರ ಕಣ್ಣನ್ನೂ ಕೆಂಪಾಗಿಸಿತ್ತು. ಆದರೆ ಈಗ ಕೋಮಲ್ ಕೂಡಾ ಗುರುಪ್ರಸಾದ್ಗೆ ಕೈಕೊಟ್ಟಿದ್ದಾರೆ.